ಬೆಟ್ಟದಪುರ: ಸಮೀಪದ ಚಿಕ್ಕಮಳಲಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘ ವಾರ್ಷಿಕ ಸಾಮಾನ್ಯ ಸಭೆಯು ಅಧ್ಯಕ್ಷ ಶಾಂತಮ್ಮ ನೇತೃತ್ವದಲ್ಲಿ ಬುಧವಾರ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಹಾಸ್ ಮಾತನಾಡಿ, ಗ್ರಾಮದಲ್ಲಿ ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇದೆ , ಗ್ರಾಮದಲ್ಲಿಯೇ ಜಾಗವನ್ನು ಗುರುತು ಮಾಡಲಾಗಿದೆ, ಎಲ್ಲರೂ ಸಹಕಾರ ನೀಡಿದರೆ ಕಟ್ಟಡ ಮಾಡಿಸುವುದರೊಂದಿಗೆ ಸಂಘಕ್ಕೆ ಬಿಎಂಸಿ ಕೇಂದ್ರವನ್ನು ನೂತನವಾಗಿ ಪ್ರಾರಂಭಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ, ಸಂಘದ ಉತ್ಪಾದಕರು ಹಾಗೂ ನಿರ್ದೇಶಕರುಗಳ ಸಹಕಾರದಿಂದ ಗುಣಮಟ್ಟದ ಹಾಲು, ಸರಬರಾಜು ಆಗುತ್ತಿದೆ, ಮತ್ತಷ್ಟು ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ತಿಳಿಸಿದರು.

ವಿಸ್ತರಣಾಧಿಕಾರಿ ಸತೀಶ್ ಮಾತನಾಡಿ ಸಂಘದಲ್ಲಿ ಉತ್ಪಾದಕರು ಹಾಲಿನ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದರಿಂದ ₹1.15 ಲಕ್ಷ ನಿವ್ವಳ ಆದಾಯ ಗಳಿಸಿದೆ, ಉತ್ಪಾದಕರು ಒಕ್ಕೂಟದಿಂದ ಸಿಗುವ ತರಬೇತಿಯನ್ನು ಪಡೆದುಕೊಂಡು ರಾಸುಗಳನ್ನು ಸಾಕುವ ವಿಧಾನ ಮತ್ತು ಅವುಗಳಿಗೆ ನೀಡುವ ಆಹಾರ ಪದ್ಧತಿಗಳನ್ನು ತಿಳಿಸಿಕೊಡಲಾಗುತ್ತದೆ, ಈ ಎಲ್ಲಾ ಖರ್ಚು ವೆಚ್ಚಗಳನ್ನು ಒಕ್ಕೂಟವೇ ಬರಿಸುವುದರಿಂದ ಸಾಧ್ಯವಾದಷ್ಟು ಉತ್ಪಾದಕರು ಈ ತರಬೇತಿಗಳ ಅನುಕೂಲವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಒಕ್ಕೂಟದಿಂದ ಸಿಗುವ ನಂದಿನಿ ಪಶು ಆಹಾರ, ಖನಿಜಮಿಶ್ರಣ, ಸಮೃದ್ಧಿ ಪುಡಿ ಎಲ್ಲವನ್ನು ರಾಸುಗಳಿಗೆ ನೀಡಿ ಹಸುಗಳು ಆರೋಗ್ಯವಾಗಿಡುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷ ಸಣ್ಣಮ್ಮ, ನಿರ್ದೇಶಕರಾದ ಇಂದ್ರಮ್ಮ, ಶಿವಮ್ಮ, ರುಕ್ಮಿಣಿ, ರೇಣುಕಾ, ಶೈಲಜಾ, ಸರೋಜಮ್ಮ, ವರಲಕ್ಷ್ಮಿ,ಪಲ್ಲವಿ, ಮಂಜುಳಾ, ಕಾರ್ಯದರ್ಶಿ ಮಹದೇವಮ್ಮ, ಸಿಬ್ಬಂದಿ ಶಿವಶಂಕರ್, ಲೋಕೇಶ್,ಮುಖಂಡರಾದ ಪ್ರಸನ್ನ, ರಾಚೇಗೌಡ, ನಾಗನಾಯಕ, ಅಶೋಕ್, ಮಂಜೇಗೌಡ, ಜಲೇಂದ್ರ ಭಾಗವಹಿಸಿದ್ದರು.