ಬೆಂಗಳೂರು: ತುಮಕೂರು ಜಿಲ್ಲೆಯ ಹೊನ್ನೇಶ್ವರ ದೇವಸ್ಥಾನದ ಸುತ್ತ-ಮುತ್ತ ಪ್ರಾಣಿಗಳ ವಧೆ ಹಾಗೂ ಮಾಂಸಾಹಾರ ಸೇವನೆ ಮಾಡದಂತೆ ನಿಷೇಧ ಹೇರಿ ಹೊರಡಿಸಲಾಗಿದ್ದ ನೋಟೀಸ್ ಅನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
2024ರಲ್ಲಿ ಹೊರಡಿಸಿದ್ದ ನೋಟೀಸ್: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿ ಇರುವ ಹೊನ್ನೇಶ್ವರ ದೇವಸ್ಥಾನದ ಸುತ್ತಲೂ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಯಾರೂ ಮಾಂಸಾಹಾರ ಸೇವನೆ ಮಾಡಬಾರದು ಹಾಗೂ ಪ್ರಾಣಿ ವಧೆ ಸಹ ಮಾಡಬಾರದು ಎಂದು ಷರತ್ತು ಹಾಕಿ ಬಡವನಹಳ್ಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು 2014ರ ಜುಲೈ 13ರಂದು ನೋಟೀಸ್ ಹೊರಡಿಸಿದ್ದರು. ಆದರೆ ಈ ನೋಟೀಸ್ ಬಗ್ಗೆ ಪ್ರಶ್ನೆ ಮಾಡಿ ಹೊನ್ನೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಹೈಕೋರ್ಟ್‌ಗೆ ಆಕ್ಷೇಪಣಾ ಅರ್ಜಿ ಸಲ್ಲಿಕೆ ಮಾಡಿತ್ತು. ಅದರ ವಿಚಾರಣೆ ಮಾಡಿದ್ದ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರ ನ್ಯಾಯಪೀಠ ಈ ಬಗ್ಗೆ ಸರ್ಕಾರವನ್ನ ಪ್ರಶ್ನೆ ಮಾಡಿತ್ತು. ಹಾಗಾಗಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಇದೀಗ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಮುಂದಿನ ವಾರ ಹೊಸ ನೋಟೀಸ್: ಇನ್ನು ಹಳೆಯ ನೋಟೀಸ್ ಹಿಂತೆಗೆದುಕೊಂಡಿರುವ ರಾಜ್ಯ ಸರ್ಕಾರ, ಮುಂದಿನ ವಾರದಲ್ಲಿ ದೇವಾಲಯದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪ್ರಾಣಿ ಬಲಿಯನ್ನ ಮಾತ್ರ ಸೀಮಿತಗೊಳಿಸಿ ಹೊಸ ನೋಟೀಸ್ ಜಾರಿ ಮಾಡುತ್ತದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.