ತಿ.ನರಸೀಪುರ : ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿಗೆ ವಿಜೇತೆ, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಹೇಳಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ”ಹೃದಯದ ಹಣತೆ ‘ಕನ್ನಡದ ಬರವಣಿಗೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೂಕರ್ ಪ್ರಶಸ್ತಿ ನೀಡಿರುವುದು ನಾಡಿಗೆ ಹೆಮ್ಮೆ ತರುವಂತದ್ದು, ಅಂತಹ ಸಾಹಿತಿಗಳನ್ನು ನಾಡಹಬ್ಬ ದಸರಾದ ಉದ್ಘಾಟನೆಗೆ ಆಹ್ವಾನಿಸಿರುವುದು ಸರಿಯಾಗಿದೆ. ಕೋಮು ದ್ವೇಷವನ್ನು ಹರಡುತ್ತಾ, ಶಾಂತಿ ಸೌಹಾರ್ದತೆಯನ್ನು ಕದಡುತ್ತಾ ಏಕ ಸಂಸ್ಕೃತಿಯನ್ನು ಪ್ರತಿಪಾದಿಸುವ ಮತಾಂಧ ಶಕ್ತಿಗಳು ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿರುವುದು ಖಂಡನೀಯ ಎಂದರು.
ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಬಗ್ಗೆ ಅಪಸ್ವರ ಎತ್ತದೇ, ನಮ್ಮ ನಾಡ ಹಬ್ಬವನ್ನು ಬಹಳ ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಮುಖಾಂತರ ಇಡೀ ದೇಶಕ್ಕೆ ಒಂದು ಮಾದರಿಯಾಗಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮನವಿ ಮಾಡಿಕೊಳ್ಳುತ್ತದೆ. ದಸರಾ ಉದ್ಘಾಟಕರಾದ ಬಾನು ಮುಷ್ತಾಕ್ ಅವರಿಗೆ ನಾವುಗಳು ಬೆಂಬಲವಾಗಿ ನಿಲ್ಲುತ್ತೇವೆ ಎಂದು ಮಲ್ಲಹಳ್ಳಿ ನಾರಾಯಣ್ ತಿಳಿಸಿದರು.
ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬನ್ನಳ್ಳಿ ಸೋಮಣ್ಣ ಮಾತನಾಡಿ, ತಾಲೂಕಿನ ತುಂಬಲ ಗ್ರಾಮದ ದಾಯಾದಿ ಕಲಹ ವಿಚಾರವಾಗಿ ಪಟ್ಟಣದ ಪೊಲೀಸರು ವಿಚಾರಣೆಗೆ ಐವರು ಯುವಕರನ್ನು ಠಾಣೆಗೆ ಕರೆಸಿಕೊಂಡು ಯುವಕರ ಮೇಲೆ ಮನ ಬಂದಂತೆ ಥಳಿಸಿ, ದೌರ್ಜನ್ಯ ನಡೆಸಿರುವುದನ್ನು ನಾವು ಕೂಡ ಖಂಡಿಸುತ್ತೇವೆ. ಯಾವುದೇ ಕೃತ್ಯಕ್ಕೆ ಸಂಬಂಧಪಟ್ಟ ಹಾಗೆ ಆರೋಪಿಗಳನ್ನು ಪೊಲೀಸರು ದೌರ್ಜನ್ಯ ಮಾಡುವುದು ಸರಿಯಲ್ಲ. ಪೊಲೀಸ್ ಇಲಾಖೆಯ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತಿರುವ ಅಧಿಕಾರಿಗಳಾಗಿದ್ದರೆ, ಇಂತಹ ಅಮಾನುಷ ಕೃತ್ಯವನ್ನು ಮಾಡುತ್ತಿರಲಿಲ್ಲ, ಸಂಘರ್ಷದ ಬಗ್ಗೆ ಆರೋಪಿ ಯುವಕರಿಗೆ ತಿಳುವಳಿಕೆ ನೀಡಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆ ಹೊರತು ಈ ರೀತಿಯ ದೌರ್ಜನ್ಯ ನಡೆಸಿರುವುದು ಮಾನವ ಹಕ್ಕುಗಳನ್ನು ಪ್ರಶ್ನೆ ಮಾಡುವಂತಿದೆ. ಕೂಡಲೇ ಇಂತಹ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಂಡು ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ವಾಟಾಳ್ ನಾಗರಾಜು, ಬೊಮ್ಮನಹಳ್ಳಿ ಕುಮಾರ್ ಇದ್ದರು.
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರಾದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ವಿರೋಧಿಸುವ ಕೋಮು ಶಕ್ತಿಗಳನ್ನು ದಸರಾ ಮುಗಿಯುವವರೆಗೆ ಸಾಂಸ್ಕೃತಿಕ ನಗರದಿಂದಲೇ ಗಡಿಪಾರು ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು.
-ಬನ್ನಳ್ಳಿ ಸೋಮಣ್ಣ, ಮೈಸೂರು ವಿಭಾಗಿಯ ಸಂಘಟನಾ ಸಂಚಾಲಕ,
ದಲಿತ ಸಂಘರ್ಷ ಸಮಿತಿ, ತಿ.ನರಸೀಪುರ