ಮಡಿಕೇರಿ : ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರ ಆದೇಶದನ್ವಯ, ಕೊಡಗು ಜಿಲ್ಲೆಯಲ್ಲಿ ನಾಳೆ ಸೆಪ್ಟೆಂಬರ್ 13 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.
ಸಾರ್ವಜನಿಕ, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ, ತಮ್ಮ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ. ರಾಜೀ ಸಂಧಾನದಲ್ಲಿ ಪಾಲ್ಗೊಂಡು, ತಮಗಾಗುವ ಆರ್ಥಿಕ ಹೊರೆ ಹಾಗೂ ಸಮಯ ಪೆÇೀಲಾಗುವುದನ್ನು ತಪ್ಪಿಸಲು, ಮೊದಲಿನ ಬಾಂಧವ್ಯ ಉಳಿಸಿಕೊಳ್ಳಲು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ರಾಜೀ ಸಂಧಾನಕ್ಕಾಗಿ ಸಿವಿಲ್ ದಾವೆಗಳು, ಭೂಸ್ವಾಧೀನ, ಬ್ಯಾಂಕ್ ವಸೂಲಾತಿ, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಎಂ.ಎಂ.ಆರ್.ಡಿ., ಚೆಕ್ ಬೌನ್ಸ್, ಮೋಟಾರು ವಾಹನ ಅಪಘಾತ, ವೈವಾಹಿಕ ಪ್ರಕರಣಗಳು ಹಾಗೂ ರಾಜೀ ಆಗಲು ಅರ್ಹವಿರುವ ರಾಜೀಯಾಗುವಂತಹ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ, ಹಲವಾರು ಪ್ರಕರಣಗಳನ್ನು ರಾಜೀಗಾಗಿ ಗುರುತಿಸಲಾಗಿದೆ.
1206 ಪ್ರಕರಣ ನಿಗದಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶುಭ ಅವರು ಈ ಹಿಂದೆ 2025 ರ ಜುಲೈ, 12 ರಂದು ನಡೆದ ಲೋಕ ಅದಾಲತ್ ನಲ್ಲಿ ವಿವಿಧ ಪ್ರಕರಣ ಹಾಗೂ ವ್ಯಾಜ್ಯಗಳಿಗೆ ಸಂಬಂಧಿಸಿ ಒಟ್ಟು 39,828 ಪ್ರಕರಣ ಇತ್ಯರ್ಥವಾಗಿತ್ತು. ಜಿಲ್ಲೆಯಲ್ಲಿ ಈಗ ಒಟ್ಟು 17,391 ಪ್ರಕರಣ ಬಾಕಿ ಇದ್ದು, ರಾಜಿಯಾಗಬಲ್ಲಂತಹ 5044 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 1206 ಪ್ರಕರಣಗಳನ್ನು ಈ ಅದಾಲತ್‍ನಲ್ಲಿ ಇತ್ಯರ್ಥ ಮಾಡಲಾಗುವುದು. ಈ ಸಂಖ್ಯೆ ಇನ್ನೂ ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ.
ಪ್ರತಿದಿನ ರಾಜೀಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂಧಪಟ್ಟ ವಕೀಲರು ಹಾಗೂ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ, ಅವರ ಮನ ಒಲಿಸಿ, ರಾಜೀ ಸಂಧಾನ ಮಾಡಿಕೊಳ್ಳಲು ತಿಳಿಯಪಡಿಸಲಾಗುವುದು, ಪ್ರಕರಣಗಳಿಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಗಳವರು ಸೆಪ್ಟೆಂಬರ್, 13 ರಂದು ಜರಗುವ, ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಪಾಲ್ಗೊಂಡು, ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಪರಿಹರಿಸಿಕೊಳ್ಳುವಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.