ಮೈಸೂರು: ಪರಿಹಾರದ ಆಸೆಗಾಗಿ ಪತ್ನಿಯು ಪತಿಯನ್ನೇ ಕೊಂದು ನಂತರ ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಈಗ ಸಿಕ್ಕಿಬಿದ್ದಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ವೆಂಕಟಸ್ವಾಮಿ (45) ಕೊಲೆಯಾದ ಪತಿ. ಪತ್ನಿ ಸಲ್ಲಾಪುರಿ ಯೇ (40) ಹಣದ ಪರಿಹಾರದ ಆಸೆಯಿಂದ ಪತಿಯನ್ನು ಕೊಂದು, ಹುಲಿ ಹೊತ್ತೊಯ್ದಿದೆಯೆಂದು ನಾಟಕವಾಡಿದ್ದಾಳೆ. ದಂಪತಿಗಳು ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು, ಅಲ್ಲಿಯೇ ತಂಗಿದ್ದರು.
ಆದರೆ ಕಳೆದ ಕೆಲ ದಿನಗಳಿಂದ ಪತಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಸಲ್ಲಾಪುರಿ ಪೊಲೀಸರಿಗೆ ದೂರು ನೀಡಿದ್ದಳು. ಅಷ್ಟೇ ಅಲ್ಲದೆ ಪತಿಯನ್ನು ಹುಲಿ ಎಳೆದುಕೊಂಡು ಹೋಗಿರಬಹುದು ಎಂದು ಅನುಮಾನ ಕೂಡ ವ್ಯಕ್ತಪಡಿಸಿದ್ದಳು.
ಈ ಮಧ್ಯೆ ಕೆಲ ದಿನಗಳ ಹಿಂದೆ ಹೆಜ್ಜೂರು ಗ್ರಾಮದ ಬಳಿಯಲ್ಲಿ ಹುಲಿ ಓಡಾಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಪತ್ನಿ ಸಲ್ಲಾಪುರಿ ಹುಲಿ ಕೊಂದಿದೆ ಎಂದು ದೂರು ನೀಡಿದ್ದಳು. ದೂರು ಸ್ವೀಕರಿಸಿದ್ದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟಸ್ವಾಮಿಗೆ ಹುಡುಕಾಡಿದ್ದಾರೆ. ಪರಿಶೀಲನೆ ವೇಳೆ ಪ್ರಾಣಿ ಹೆಜ್ಜೆ ಗುರುತು ಪ್ತತೆಯಾಗಿತ್ತು. ಆದರೇ ಹುಲಿ ಎಲ್ಲೂ ಕಂಡಿರಲಿಲ್ಲ. ಮನೆ ಹಿಂದಿನ ತಿಪ್ಪೆಗುಂಡಿಯಲ್ಲೇ ವೆಂಕಟಸ್ವಾಮಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ವರಸೆಯಲ್ಲಿ ಸಲ್ಲಾಪುರಿ ವಿಚಾರಿಸಿದಾಗ, ಪರಿಹಾರದ ಆಸೆಗೆ ಪತಿಯನ್ನು ಕೊಂದು, ಈ ನಾಟಕ ಆಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಊಟದಲ್ಲಿ ವಿಷ ಹಾಕಿ ಕೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.