ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಷೇರು ರದ್ದತಿ, ಸಹಾಯಧನ ವಿತರಣೆಯ ಲೋಪ, ಹಣವಿತರಣೆಯ ಬಗ್ಗೆ ಮಾತಿನ ಚಕಮಕಿ ಇದು ಚುಂಚನಕಟ್ಟೆ ಹಾಲು ಉತ್ಪಾದಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕಂಡು ಬಂದ ದೃಶ್ಯಗಳು…
ಸಾಲಿಗ್ರಾಮ ತಾಲ್ಲೋಕಿನ ಚುಂಚನಕಟ್ಟೆ ಮಹಿಳಾ ಡೈರಿಯಲ್ಲಿ ಇಂದು ನಡೆದ ವಾರ್ಷಿಕ ಮಹಾಸಭೆ ಗೊಂದಲದ ಗೂಡಾಗಿದ್ದು ಸಂಘದಲ್ಲಿ ಚುನಾವಣಾ ವರ್ಷವಾಗಿರುವ ಕಾರಣ ಹಿಂದೆ ಇದ್ದ ಷೇರುದಾರನ್ನು ರದ್ದು ಮಾಡಿ ತಮ್ಮ ಷೇರುಗಳನ್ನು ಅಮಾನತ್ತಿನಲ್ಲಿಟ್ಟಿರುವ ಕುರಿತು ಆಡಳಿತಾಧಿಕಾರಿಯಾಗಿರುವ ನಾಗರಾಜ್ ಅವರನ್ನು ಸಂಘದ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಸoಘದ ಸಿಇಒ ಫ್ರಭಾವತಿ ಅವರ ವಿರುದ್ದ ದೂರುಗಳ ಸುರಿಮಳೆಗೈದ ಸದಸ್ಯರು ಸಂಘದಲ್ಲಿ ೨೦ವರ್ಷಗಳಿಂದ ವಾರ್ಷಿಕ ಮಹಾಸಭೆಯನ್ನು ಕರೆಯದೇ,ಸದಸ್ಯರಿಗೆ ಬೋನಸ್ ಆಗಲಿ ವಿತರಣೆ ಮಾಡಿಲ್ಲ ಸಂಘದ ಆಡಳಿತ ಸಂಪೂರ್ಣವಾಗಿ ಸಿಇಒ ಅವರಿಂದಲೇ ಏಕಪಕ್ಷೀಯವಾಗಿ ನಡೆಯುತ್ತಿದ್ದು ಈ ಹಿಂದೆ ಈ ವಿಚಾರವಾಗಿ ಪ್ರಶ್ನಿಸಿದರೆ ರೈತ ಮಹಿಳೆಯರು ಪತಿಯಂದಿರ ಮೇಲೆ ಕೇಸುಗಳನ್ನು ದಾಖಲಿಸಿದ್ದು ಕುಟುಂಬದವರಿoದ ಮಹಿಳೆಯರನ್ನು ಧಮ್ಕಿ ಹಾಕುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮಹಿಳಾ ಸಂಘವಾಗಿರುವುದರಿoದ ಅನ್ಯಾಯ ಸರಿಪಡಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ತಕ್ಷಣ ಎಲ್ಲರನ್ನು ಒಳಗೊಂಡ ಹಾಲು ಉತ್ಪಾದಕ ಸಂಘವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದ ಅವರು ಈಗ ನೀಡಿರುವ ಲೆಕ್ಕಪತ್ರಗಳೂ ಕೂಡಾ ತಪ್ಪಾಗಿದ್ದು ಲಕ್ಷಾಂತರ ರೂಗಳ ರೈತರ ಹಣ ದುರುಪಯೋಗವಾಗಿದೆ ಲೆಕ್ಕಪರಿಶೋದಕರ ನೇಮಕ ಮೈಮುಲ್ ಕಡೆಯಿಂದ ನೇಮಕ ಮಾಡಿ ಪಾರದರ್ಶಕ ಆಡಳಿತ ನಡೆಸುವಂತಾಗಲಿ ಎಂದು ಆಗ್ರಹಿಸಿದರು.
ಈ ಬಗ್ಗೆ ಆಡಳಿತಾಧಿಕಾರಿ ನಾಗರಾಜ್ ಮಾತನಾಡಿಸಂಘವು ಒಟ್ಟಾರೆ ಈ ಆರ್ಥಿಕ ವರ್ಷದಲ್ಲಿ ೧.೬೫ಲಕ್ಷರೂಗಳ ಆದಾಯಗಳಿಸಿದ್ದು, ಷೇರದಾರ ರೈತ ಮಹಿಳೆಯರ ಹಕ್ಕನ್ನು ಯಾರಿಂದಲೂ ಕಸಿಯಲು ಬಿಡುವುದಿಲ್ಲ ಹಾಗೂ ಸಂಘದಲ್ಲಿ ಇರುವ ಕೆಲವು ಗೊಂದಲಗಳನ್ನು ಬಗೆಹರಿಸಲಾಗುವುದು ಜೊತಗೆ ಯಾವುದೇ ಹಣಕಾಸಿನ ದುರುಪಯೋಗಕ್ಕೆ ಆಸ್ಪದ ನೀಡುವುದಿಲ್ಲ ಎಂದ ಅವರು ಮುಂದಿನ ದಿನಗಳಲ್ಲಿ ಈಗಿರುವ ಮತ್ತು ಹೊಸ ಷೇರುದಾರರನ್ನು ಹೆಚ್ಚಿಸಿ ಸಂಘದ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದರು.
ಸಭೆಯಲ್ಲಿ ಮಾರ್ಗ ವಿಸ್ತರಣಾಧಿಕಾರಿ ಅಭಿಷೇಕ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕಿ ಗಾಯತ್ರಮ್ಮ, ಗ್ರಾಪಂ ಅಧ್ಯಕ್ಷೆ ಶಾರದಮ್ಮ,ಮಾಜಿ ಅಧ್ಯಕ್ಷೆ ಗೌರಮ್ಮ, ಮಾಜಿ ಸದಸ್ಯೆ ಪ್ರೇಮಮ್ಮ, ರಾಜಮ್ಮ, ಲಲಿತ, ಸಂಘದ ಮಾಜಿ ಅಧ್ಯಕ್ಷೆ ಉಷಾ, ಸೌಮ್ಯಸತೀಶ್, ರೇಣುಕಾಮಧು, ಲಲಿತಾ, ಅನಿತಾ, ಶಿಲ್ಪ ಸೇರಿದಂತೆ ಷೇರುದಾರ ರೈತಮಹಿಳೆಯರು ಹಾಜರಿದ್ದರು.