ಹೊನ್ನಾವರ : ಕರ್ನಾಟಕದ ಪ್ರಸಿದ್ಧ ಜನಪದ ವಿದ್ವಾಂಸ, ಸಂಶೋಧಕ ಡಾ. ಎನ್.ಆರ್. ನಾಯಕ (90) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಎನ್.ಆರ್. ನಾಯಕ ಅವರು, ಅಂಕೋಲಾ ತಾಲೂಕು ಬಾವಿಕೇರಿ ಮೂಲದ ಅವರು ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಪ್ರಾಧಿಕಾರ, ಕನ್ನಡ ಅಭ್ಯಾಸ ಮಂಡಳಿ ಸೇರಿ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಪಡುಕೋಗಿಲೆ, ಕನ್ನಡ ಬಯಲಾಟ ಪರಂಪರೆ, ಜೇಂಗೊಡ, ಹಾಲಕ್ಕಿ ಒಕ್ಕಲಿಗರ ಜನಪದ ಗೀತೆಗಳು, ಸುಗ್ಗಿಯ ಪದಗಳು, ಗಾಮೊಕ್ಕಲ ಮಹಾಭಾರತ, ಮುಕ್ರಿಗಳ ಜನಪದ ಗೀತೆ ಮತ್ತು ಕಥೆಗಳು ಸೇರಿ ನೂರಾರು ಕೃತಿಗಳನ್ನು ಪ್ರಕಟಿಸಿದ್ದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ’(1993), ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ(2003), ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ, ದೆಹಲಿಯ ಕರ್ನಾಟಕ ಸಂಘದಿಂದ ಪ್ರಶಸ್ತಿ, ಗೊರುಚ ಪ್ರಶಸ್ತಿ, ವಿ.ಸಿ.ಸನ್ಮಾನ, ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿಯಿಂದ, ಜಿ. ನಾರಾಯಣ ಅಡಿಗ ಪ್ರಶಸ್ತಿ ಹತ್ತು ಹಲವು ಪ್ರಶಸ್ತಿಗಳು,ಹಲವು ಗೌರವಗಳು ಡಾ. ನಾಯಕ ಅವರಿಗೆ ಲಭಿಸಿವೆ.