ಬೆಂಗಳೂರು: 2019-2023 ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕರ್ನಟಕ ರಾಜ್ಯ ಗುತ್ತಿಗೆದಾರರ ಸಂಘ ಆರೋಪ ಮಾಡಿದ್ದ ಶೇ. 40 ಲಂಚ ಆರೋಪ ಕುರಿತು ತನಿಖೆ ನಡೆಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ವಿಚಾರಣಾ ಆಯೋಗ ಈಗಾಗಲೇ ವರದಿ ಸಲ್ಲಿಸಿದೆ. ಈ ವರದಿಯನ್ನು ಕೂಲಂಕಶವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಲಾಗಿದೆ.
ನಿವೃತ್ತ ಮುಖ್ಯ ಎಂಜಿನಿಯರ್‌ಗಳಾದ ಶ್ರೀನಿವಾಸ್, ಕೆ.ಪಿ. ಶಿವಕುಮಾರ್, ರಾಷ್ಟ್ರೀಯ ಹೆದ್ದಾರಿ ದಕ್ಷಿಣ ವಲಯ ಲೆಕ್ಕಾಧಿಕಾರಿ (ಮುಖ್ಯ ಎಂಜಿನಿಯರ್) ಲೋಕೇಶ್ ವಿ. ಕುಕ್ಯಾನ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ (ಸಂಪರ್ಕ ಮತ್ತು ಕಟ್ಟಡ), ಅಧೀಕ್ಷಕ ಎಂಜಿನಿಯರ್ (ಸಂಪರ್ಕ ಮತ್ತು ಕಟ್ಟಡ, ದಕ್ಷಿಣ) ಈ ಐವರು ಸಮಿತಿಯ ಸದಸ್ಯರು. ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಎಂಜಿನಿಯರ್ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ 2019ರ ಜುಲೈ 26ರಿಂದ 2023ರ ಮಾರ್ಚ್ 31ರ ಅವಧಿಯಲ್ಲಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಜಲಸಂಪನ್ಮೂಲ ಇಲಾಖೆ, ಬಿಡಿಎ ಮತ್ತು ಬೃಹತ್ ಬೆಂಗಳೂರು ಮಹಾನಗರರ ಪಾಲಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಂಘ ಆರೋಪ ಮಾಡಿತ್ತು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಕಾಮಗಾರಿಗಳಲ್ಲಿ ಶೇ. 40 ಲಂಚ ಕೊಡಬೇಕಾಗಿದೆ ಎಂದು ಆರೋಪ ಮಾಡಿದ್ದರು. ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ. 40 ಲಂಚ ರಷ್ಟು ಲಂಚ ಕುರಿತು ತನಿಖೆ ನಡೆಸಲು ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದ್ದರು.
ನಾಗನೋಹನ್ ದಾಸ್ ಆಯೋಗವು ಕಾಮಗಾರಿಗಳ ಟೆಂಡರ್, ಹಣ ಬಿಡುಗಡೆ ಕಾಮಗಾರಿ ಕುರಿತು ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿವೆ. ಕೆಲವು ಕಾಮಗಾರಿಗಳಲ್ಲಿ ಹೆಚ್ಚು ಹಣ ಪಾವತಿಯಾಗಿದ್ದರೆ ಕೆಲವು ಅನುಮಾನ ಮೂಡಿಸುತ್ತವೆ ಎಂದು ವರದಿ ನೀಡಿತ್ತು.