ಕೊಪ್ಪಳ: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಈ ನಡುವೆ ಸಚಿವ ಶಿವರಾಜ್ ತಂಗಡಗಿಯವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹೇಳಿಕೆಯೊಂದನ್ನು ಪ್ರಸ್ತಾಪಿಸುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.ಇಂದು ಹೈಕೋರ್ಟ್ ಪ್ರತಾಪ್ ಸಿಂಹ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಾನು ಮುಷ್ತಾಕ್ ಕನ್ನಡದ ಹೆಮ್ಮೆ, ನಾಡಹಬ್ಬ ದಸರಾಗೆ ಎಲ್ಲಾ ಸಮುದಾಯದ ಜನರು ಬರುತ್ತಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದ ದೇವೇಗೌಡರನ್ನು ಬಿಜೆಪಿ ಯಾಕೆ ತಮ್ಮ ಪಕ್ಷಕ್ಕೆ ಕರೆದುಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ಕೊಟ್ಟಿಲ್ಲ ಟಿಕೆಟ್ ತಪ್ಪಿದೆ ಅಂದರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ. ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಬಿಜೆಪಿ ನಾಯಕರ ಮಕ್ಕಳೆಲ್ಲ ವಿದೇಶದಲ್ಲಿ ಇದ್ದಾರೆ. ಬಿಜೆಪಿಯವರು ಬಡವರ ಮಕ್ಕಳನ್ನು ಹೋರಾಟಕ್ಕೆ ಕಳುಹಿಸುತ್ತಾರೆ. ತಾಕತ್ತಿದ್ದರೆ ಬಿಜೆಪಿಯವರು ತಮ್ಮ ಮಕ್ಕಳ ಜೊತೆ ಹೋರಾಟಕ್ಕೆ ಬರಲಿ ಎಂದು ವಾಗ್ದಾಳಿ ನಡೆಸಿದರು.