ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ಸಂಕಷ್ಟ ಎದುರಾಗಿದೆ. ಅಕ್ರಮ ಬೆಟ್ಟಿಂಗ್ ಆಪ್ ಹಣ ವರ್ಗಾವಣೆ ಪ್ರಕರಣ ಸಂಬಂಧ ನೋಟಿಸ್ ಜಾರಿಯಾಗಿದೆ.
ಬೆಟ್ಟಿಂಗ್ ಆಪ್ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪಗೆ ಸಮನ್ಸ್ ಜಾರಿ ಮಾಡಿದೆ. ಕೆಲವೇ ದಿನಗಳಲ್ಲಿ ವಿಚಾರಣೆಗೆ ಒಳಪಡಿಸೋ ಸಾಧ್ಯತೆ ಕೂಡ ಇದೆ.
ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಮತ್ತು ಹಣಕಾಸಿನ ಅಕ್ರಮಗಳ ಬಗ್ಗೆ ಏಜೆನ್ಸಿಯು ತನ್ನ ತನಿಖೆಯನ್ನು ವಿಸ್ತರಿಸಿದ್ದು, ತನಿಖೆಯ ಭಾಗವಾಗಿ ರಾಬಿನ್ ಉತ್ತಪ್ಪಗೆ ನೋಟಿಸ್ ಜಾರಿಯಾಗಿದೆ. ಇದೇ ಪ್ರಕರಣದಲ್ಲಿ ಹಲವರ ಹೆಸರು ಥಳಕು ಹಾಕಿಕೊಂಡಿದ್ದು, ಹಂತ ಹಂತವಾಗಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸೋ ಸಾಧ್ಯತೆ ಇದೆ. ಈ ಸಂಬಂಧ ಉತ್ತಪ್ಪ ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಬಿನ್ ಉತ್ತಪ್ಪ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.
ಇನ್ನು,ಬೆಟ್ಟಿಂಗ್ ಆ್ಯಪ್ ಗಳನ್ನು ಪ್ರಮೋಟ್ ಮಾಡಿದಕ್ಕಾಗಿ ಈಗಾಗಲೇ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಸೇರಿದಂತೆ 25 ಸೆಲೆಬ್ರಿಟಿಗಳ ವಿರುದ್ಧ ದೂರು ದಾಖಲಿಸಿಕೊಂಡ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಸ್ಟಾರ್ ಅಲ್ ರೌಂಡರ್ ಸುರೇಶ್ ರೈನಾಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಬೆಟ್ಟಿಂಗ್ ಆ್ಯಪ್ ಗಳನ್ನು ಪ್ರಮೋಟ್ ಮಾಡಿದ್ದಕ್ಕಾಗಿ ತೆಲಂಗಾಣ ಪೊಲೀಸರು 25 ತಾರೆಯರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ಇದೀಗ 1xBet ಎಂಬ ಆನ್ ಲೈನ್ ಬೆಟ್ಟಿಂಗ್ ಅಪ್ ಪ್ರಮೋಟ್ ಮಾಡಿದ್ದಕ್ಕಾಗಿ ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.
ರೈನಾ ಅವರನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 1xBet ಬೆಟ್ಟಿಂಗ್ ಆ್ಯಪ್ ಗೆ ರಾಯಭಾರಿಯಾಗಿ ನೇಮಕ ಮಾಡಲಾಗಿತ್ತು. ಈ ಹಿನ್ನಲೆ ರೈನಾ ಕೂಡ ಆ್ಯಪ್ ಅನ್ನು ಪ್ರಮೋಟ್ ಮಾಡಿದ್ದರು. ಇದೀಗ ರೈನಾ ಸೆಲೆಬ್ರಿಟಿ ಆದ್ದರಿಂದ ಕ್ರಿಕೆಟ್ ಪ್ರಿಯರು ಬೆಟ್ಟಿಂಗ್ ಆ್ಯಪ್ ಗೆ ಮರುಳಾಗಿ ಸಂಕಷ್ಟ ಅನುಭವಿಸುತ್ತಾರೆ. ಹೀಗಾಗಿ ಇದು ಕಾನೂನು ಬಾಹಿರ ಎಂದು ಹೇಳಿ ಸಮನ್ಸ್ ನೀಡಿದ್ದಾರೆ.
ಜಾರಿ ನಿರ್ದೇಶನಲಯ ಜಾರಿ ಮಾಡಿದ ಸಮನ್ಸ್ ಮೇರೆಗೆ ಇಂದು ಸುರೇಶ್ ರೈನಾ ವಿಚಾರಣೆಗೆ ಹಾಜರಾಗಲಿದ್ದಾರೆ. ರೈನಾ ಮಾತ್ರವಲ್ಲದೆ, ಅನೇಕ ಕ್ರಿಕೆಟಿಗರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸಹ ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಒಳಗಾಗಿದ್ದಾರೆ. ಸದ್ಯ ಇಡಿ ಅಧಿಕಾರಿಗಳು ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ