ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣ ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾಗಿದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿದೆ.
ಬಿ.ಎಸ್.ಯಡಿಯೂರಪ್ಪ ಅವರು ಹೈಕೋರ್ಟ್ ನಲ್ಲಿ ನನ್ನ ವಿರುದ್ಧ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಅಂಗೀಕರಿಸಿರುವುದನ್ನು ರದ್ದುಗೊಳಿಸಬೇಕು ಎಂದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ಐ.ಅರುಣ್ ವಿಚಾರಣೆಗೆ ಕೈಗೆತ್ತಿಕೊಂಡರು.
ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದರು. ಈ ಪ್ರಕರಣದಲ್ಲಿ ನಿಮ್ಮ ಸಮಸ್ಯೆಗಳೇನು, ನಿಮಗೆ ಕಿರುಕುಳ ಎಲ್ಲಿ ನೀಡಬಹುದು ಎಂಬುದನ್ನು ಮಾತ್ರವೇ ಗಮನಿಸಿ ಒಂದು ತೀರ್ಮಾನಕ್ಕೆ ಬರಬಹುದು. ಆದರೆ, ನೀವು ಹೀಗೆಯೇ ವಾದ ಮಂಡನೆ ಮಾಡುತ್ತಿದ್ದರೆ ಹೇಗೆ ಎಂದು ಪ್ರಶ್ನಿಸಿತು.
ಯಡಿಯೂರಪ್ಪ ಅವರಿಗೆ ಗೆ ಇಷ್ಟು ವಯಸ್ಸಾಗಿದೆ. ಕಾರಣ ಇಲ್ಲದೆ ಸಮನ್ ಮಾಡಬಾರದು ಎಂದರೆ ಹೇಗೆ? ಆದರೆ ಇದು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾದ ಪ್ರಕರಣ ಎಂದು ಅನ್ನಿಸುತ್ತಿದೆ. ನೀವು ವಾದವನ್ನು ಮುಂದುವರೆಸುವ ಅಗತ್ಯ ಇಲ್ಲ. ಪೋಕ್ಸೊ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲು ಸಂತ್ರಸ್ತೆಯ ಹೇಳಿಕೆ ಸಾಕಾಗುತ್ತದೆ. ನ್ಯಾಯಾಲಯ ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಬೇಕಿದೆ ಎಂದು ಮೌಖಿಕವಾಗಿ ನ್ಯಾಯಮೂರ್ತಿಗಳು ಹೇಳಿದರು.
ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ವಕೀಲ ರವಿವರ್ಮ ಕುಮಾರ್ ಮತ್ತು ಅಶೋಕ್ ಎನ್.ನಾಯಕ್ ಅವರು ವಾದಿಸಿ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಸಂತ್ರಸ್ತೆ ಮತ್ತು ಆಕೆಯ ತಾಯಿಯ ಧ್ವನಿಯನ್ನು ಖಚಿತಪಡಿಸಿವೆ. ಅರ್ಜಿದಾರರು ತಮ್ಮ ಪರವಾದ ಸಾಕ್ಷಿಗಳನ್ನೇ ಉದಾಹರಿಸಿ ಪರಿಹಾರ ಕೇಳುವುದು ಸರಿಯಲ್ಲ ಎಂದರು. ನಂತರ ಹೈಕೋರ್ಟ್ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿತು.
2024ರ ಫೆಬ್ರುವರಿಯಲ್ಲಿ ನನ್ನ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೆರವು ನೀಡುವಂತೆ ಸಂತ್ರಸ್ತ ಬಾಲಕಿಯ ತಾಯಿ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ್ದರು. ಆಗ ಯಡಿಯೂರಪ್ಪ ಅವರು ಬಾಲಕಿಯನ್ನು ಕೋಣೆಯೊಂದಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.