Thursday, September 18, 2025
Google search engine

Homeರಾಜ್ಯಸುದ್ದಿಜಾಲಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಿ: ದೂರು ಬರದಂತೆ ಗಮನಹರಿಸಿ: ಸಚಿವ ಸಂತೋಷ್ ಎಸ್.ಲಾಡ್

ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸಿ: ದೂರು ಬರದಂತೆ ಗಮನಹರಿಸಿ: ಸಚಿವ ಸಂತೋಷ್ ಎಸ್.ಲಾಡ್

ಮಡಿಕೇರಿ : ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಅವರು ಕಾರ್ಮಿಕ ಸಂಘಟನೆಗಳು, ಹೋಂಸ್ಟೇ ಹಾಗೂ ಹೋಟೆಲ್ ಅಸೋಷಿಯೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಜೊತೆ ಚರ್ಚಿಸಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು ಕಾರ್ಮಿಕರಿಗೆ ಕನಿಷ್ಠ ವೇತನ ಕಲ್ಪಿಸಬೇಕು. ಆರೋಗ್ಯ ವಿಮೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವಂತಾಗಲು ಕಾರ್ಮಿಕರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.

ಹೋಂಸ್ಟೇ, ಹೋಟೆಲ್ ಸೇರಿದಂತೆ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು. ಸಿಸಿಟಿವಿ ಅಳವಡಿಸುವುದು, ಸಂಚಾರಿ ದೂರವಾಣಿ ಸಂಖ್ಯೆ ಸೇರಿದಂತೆ ವಾಸ್ತವ್ಯ ಹೂಡುವವರ ಮಾಹಿತಿ ಇರಬೇಕು ಎಂದು ಸಂತೋಷ್ ಲಾಡ್ ಅವರು ಹೇಳಿದರು.

ಹೋಂ ಸ್ಟೇ ನೋಂದಣಿ, ಪರವಾನಗಿ, ನವೀಕರಣ ಸಂಬಂಧ ಪ್ರವಾಸೋದ್ಯಮ, ಪೌರಾಡಳಿತ ಹಾಗೂ ಪಂಚಾಯತ್ ರಾಜ್ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವರು ತಿಳಿಸಿದರು.

ಜೊತೆಗೆ ಶಾಸಕರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಲು ನಿಯೋಗ ತೆರಳುವಂತೆ ಸಲಹೆ ಮಾಡಿದರು. ಹೋಂ ಸ್ಟೇ ನೋಂದಣಿ, ಪರವಾನಗಿ ನೋಂದಣಿ ಮತ್ತಿತರ ಸಂಬಂಧ ಸಕಾಲದಲ್ಲಿ ಅರ್ಜಿ ಸಲ್ಲಿಸುವಂತೆ ಸಲಹೆ ಮಾಡಿದರು. ಹೋಂಸ್ಟೇ ಅಸೋಷಿಯೇಷನ್ ಅವರು ಒಂದೆಡೆ ಸೇರಿ ಒಬ್ಬರನ್ನು ಪಿಆರ್‍ಒ ಅಥವಾ ಲೈಜನಿಂಗ್ ಅಧಿಕಾರಿಯನ್ನು ನಿಯೋಜಿಸಿಕೊಳ್ಳುವುದರಿಂದ ಹೋಂಸ್ಟೇ ನೋಂದಣಿ, ನವೀಕರಣ ಬಗ್ಗೆ ಗಮನಹರಿಸಬಹುದಾಗಿದೆ ಎಂದರು.

ಕಾರ್ಮಿಕರ ವೇತನ ಮತ್ತಿತ್ತರ ಬಗ್ಗೆ ದೂರುಗಳು ಬಂದರೆ ಕಂದಾಯ, ಕಾರ್ಮಿಕ, ಪ್ರವಾಸೋದ್ಯಮ ಪೊಲೀಸ್, ಸೆಸ್ಕ್, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳು, ಹೀಗೆ ಜಂಟಿ ತಪಾಸಣೆ ಕೈಗೊಳ್ಳಬೇಕು ಎಂದು ಸಚಿವರು ಸಲಹೆ ಮಾಡಿದರು.ಸಿಂಗಲ್ ವಿಂಡೋ ಮಾದರಿಯಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆ ಸಂದರ್ಭದಲ್ಲಿ ಹೋಂಸ್ಟೇ ಸಂಬಂಧ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬಹುದಾಗಿದೆ ಎಂದು ಸಚಿವರು ಸಲಹೆ ಮಾಡಿದರು.

ಕೊಡಗು ಜಿಲ್ಲೆಯ ನೆಲ, ಜಲ, ಸಂಸ್ಕøತಿ, ಪರಿಸರ ಉಳಿಸಿಕೊಂಡು ಹೋಗಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್, ಪೌರಾಡಳಿತ ಸಚಿವರಾದ ರಹೀಮ್ ಖಾನ್, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ದಸರಾ ನಂತರ ನಿಯೋಗ ತೆರಳಿ ಭೇಟಿ ಮಾಡಲಾಗುವುದು ಎಂದರು.

ಹೋಂಸ್ಟೇ ಅಸೋಷಿಯೇಷನ್‍ಗಳು ಆನ್‍ಲೈನ್ ಮೂಲಕ ನೋಂದಣಿ ಮಾಡಬೇಕಿದ್ದು, ಕೆಲವು ತಾಂತ್ರಿಕ ತೊಂದರೆಯಿಂದ ವಿಳಂಬವಾಗುತ್ತಿದೆ. ಆದ್ದರಿಂದ ಮ್ಯಾನ್ಯುವೆಲ್ ಮೂಲಕ ನೋಂದಣಿ ಮಾಡಿಕೊಳ್ಳುವಂತಾಗಬೇಕು. ಪರವಾನಗಿ ನವೀಕರಣ ಮಾಡಬೇಕು ಎಂದು ಶಾಸಕರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರತಿನಿಧಿ ಅವರು ಜಿಲ್ಲೆಯಲ್ಲಿ ಸುಮಾರು 230 ಅರ್ಜಿಗಳು ಬಾಕಿ ಇದೆ ಎಂದು ತಿಳಿಸಿದರು.ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮದಿಂದ ಹಲವರಿಗೆ ಉದ್ಯೋಗ ದೊರೆತಿದೆ ಎಂದರು.ಹೋಂ ಸ್ಟೇ ಅಸೋಷಿಯೇಷನ್‍ನ ಮಾಜಿ ಅಧ್ಯಕ್ಷರಾದ ದಿಲೀಪ್ ಚಂಗಪ್ಪ ಅವರು ಮಾತನಾಡಿ ಹೋಂ ಸ್ಟೇಗಳ ನೋಂದಣಿ, ಪರವಾನಗಿ ನವೀಕರಣ ಮತ್ತಿತರ ಸಂಬಂಧ ಕಾಲ ಮಿತಿಯಲ್ಲಿ ಆಗಬೇಕು ಎಂದು ಮನವಿ ಮಾಡಿದರು.

ಮತ್ತೊಬ್ಬ ಮಾಜಿ ಅಧ್ಯಕ್ಷರಾದ ಕರುಂಬಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಹಲವು ಹೋಂ ಸ್ಟೇಗಳು ನವೀಕರಣ ಮಾಡಲು ಬಾಕಿ ಇದ್ದು, ಇದು ತ್ವರಿತ ಗತಿಯಲ್ಲಿ ಆಗಬೇಕಿದೆ ಎಂದು ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಪೊಲೀಸ್ ಇಲಾಖೆಯಿಂದ ಕಾಲ ಮಿತಿಯಲ್ಲಿ ಎನ್‍ಒಸಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಮಿಕ ಸಂಘಟನೆಯ ಮುಖಂಡರಾದ ಭರತ್ ಅವರು ಮಾತನಾಡಿ ಜಿಲ್ಲೆಯಲ್ಲಿ ಕಾರ್ಮಿಕ ನಿರೀಕ್ಷಕ ಅಧಿಕಾರಿಯವರ ಕೊರತೆ ಇದ್ದು, ವಿರಾಜಪೇಟೆ ಮತ್ತು ಸೋಮವಾರಪೇಟೆಗೆ ಒಬ್ಬರೇ ಅಧಿಕಾರಿ ಇದ್ದಾರೆ. ವಿರಾಜಪೇಟೆ ಮತ್ತು ಪೊನ್ನಂಪೇಟೆಗೆ ಕಾರ್ಮಿಕ ನಿರೀಕ್ಷಕ ಅಧಿಕಾರಿಯವರನ್ನು ನಿಯೋಜಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಕಾರ್ಮಿಕ ನ್ಯಾಯಾಧೀಶರಿಲ್ಲದೆ ಹಲವು ಪ್ರಕರಣಗಳು ಬಾಕಿ ಇದ್ದು, ಕಾರ್ಮಿಕ ನ್ಯಾಯಾಧೀಶರನ್ನು ನಿಯೋಜಿಸುವಂತಾಗಬೇಕು ಎಂದು ಸಚಿವರಲ್ಲಿ ಕೋರಿದರು.ಕೊಡಗು ಜಿಲ್ಲೆಯಲ್ಲಿ ಜೀತಪದ್ಧತಿ ಇನ್ನೂ ಸಹ ಜೀವಂತವಾಗಿದೆ. ಇದನ್ನು ಹೋಗಲಾಡಿಸಬೇಕು ಎಂದು ಸಚಿವರಲ್ಲಿ ಭರತ್ ಅವರು ಮನವಿ ಮಾಡಿದರು.

ಯರವ, ಪಣಿಯ ಎರವ, ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ ಆದಿವಾಸಿ ಕುಟುಂಬಗಳು ಇಂದಿಗೂ ಸಹ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಇಂತಹ ಕೂಲಿ ಕಾರ್ಮಿಕರಿಗೆ ಕನಿಷ್ಠ ವೇತನ ತಲುಪುವಂತಾಗಬೇಕು ಎಂದು ಕೋರಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ನಿರ್ದಿಷ್ಟ ಪ್ರಕರಣ ಹೇಳಿದ್ದಲ್ಲಿ ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಕಾರ್ಮಿಕ, ಸೆಸ್ಕ್ ಸೇರಿದಂತೆ ಜಂಟಿ ತಂಡ ತೆರಳಿ ಪರಿಶೀಲನೆ ಮಾಡಲಿದ್ದಾರೆ ಎಂದು ಸಚಿವರು ಹೇಳಿದರು.

ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ದೂರು ಬಂದರೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.ತೋಟ ಕಾರ್ಮಿಕ ಸಂಘಟನೆಯ ಮಹಾದೇವು ಅವರು ಮಾತನಾಡಿ ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಕಾರ್ಮಿಕರನ್ನು ಮಾರುತ್ತಿರುವ ಬೆಳವಣಿಗೆ ಸಹ ನಡೆಯುತ್ತಿವೆ ಎಂದು ಸಚಿವರ ಗಮನಕ್ಕೆ ತಂದರು.

ಈ ಕುರಿತು ಮಾತನಾಡಿದ ಸಚಿವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ, ನಿರ್ದಿಷ್ಟ ಪ್ರಕರಣ ಇದ್ದಲ್ಲಿ ಮಾಹಿತಿ ಒದಗಿಸಿ ಎಂದು ಸಲಹೆ ಮಾಡಿದರು.ಕಾಫಿ ಬೆಳೆಗಾರರಾದ ಬೋಸ್ ಮಂದಣ್ಣ ಅವರು ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲಾಗುತ್ತಿದ್ದು, ನಿರ್ದಿಷ್ಟ ಪ್ರಕರಣ ಮಾಹಿತಿ ನೀಡಿದಲ್ಲಿ ಕ್ರಮವಹಿಸಲಾಗುವುದು ಎಂದರು.

ಕುಶಾಲನಗರ ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷರಾದ ಕೆ.ಎಸ್.ನಾಗೇಶ್ ಅವರು ಮಾತನಾಡಿ ಹಳೇ ಕಟ್ಟಡಗಳಿಗೆ ಕಾರ್ಮಿಕ ಕಲ್ಯಾಣ ನಿಧಿಯ ಸುಂಕ ಪಾವತಿ ಸಂಬಂಧ ನೋಟೀಸ್ ನೀಡುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಯಾರಿಗೂ ತೊಂದರೆ ಮಾಡಬೇಕು ಎಂಬುದು ಇಲಾಖೆಯ ಉದ್ದೇಶವಲ್ಲ, ಆದರೆ ನಿಯಮಾನುಸಾರ ಸುಂಕ ಪಾವತಿಸಲಿ ಎಂಬುದು ಉದ್ಧೇಶವಾಗಿದೆ. ಈ ಬಗ್ಗೆ ವಿಚಲಿತರಾಗಬೇಕಿಲ್ಲ ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಕಾವೇರಿ ಅವರು ಮಾತನಾಡಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಂಬಂಧಿಸಿದಂತೆ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಮುಖರಾದ ಧನಂಜಯ, ಚೇಂಬರ್ ಆಫ್ ಕಾಮರ್ಸ್ ತಾಲ್ಲೂಕು ಘಟಕದ ಅಧ್ಯಕ್ಷರಾದ ಧನುಕುಮಾರ್, ಸಂತೋಷ್ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷರಾದ ಮಹರೂಸ್ ಖಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಕಾರ್ಮಿಕ ಇಲಾಖೆ ಆಯುಕ್ತರಾದ ಎಚ್.ಎನ್.ಗೋಪಾಲಕೃಷ್ಣ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕಾರ್ಮಿಕ ಇಲಾಖೆ ಜಂಟಿ ಆಯುಕ್ತರಾದ ಡಾ.ಎಸ್.ಬಿ.ರವಿಕುಮಾರ, ಉಪ ಕಾರ್ಮಿಕ ಆಯುಕ್ತರಾದ ಎಚ್.ಎಲ್.ಗುರುಪ್ರಸಾದ್, ನಾಜಿಯಾ ಸುಲ್ತಾನ, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ, ಶಶಿಧರ, ಇತರರು ಇದ್ದರು.

RELATED ARTICLES
- Advertisment -
Google search engine

Most Popular