ಬೆಂಗಳೂರು : ಅನೈತಿಕ ಚಟುವಟಿಕೆ, ಡ್ರಗ್ಸ್ ಮಾಫಿಯ ಸೇರಿದಂತೆ ಇನ್ನಿತರ ದಂಧೆಯ ಜೊತೆಗೆ ಆರೋಪಿಗಳ ಜೊತೆ ಶಾಮಿಲಾಗಿರುವುದು ಕಂಡು ಬಂದರೆ ಇನ್ನು ಮುಂದೆ ಎಚ್ಚರಿಕೆ ಕೊಡುವುದಿಲ್ಲ, ಕ್ರಮ ತೆಗೆದುಕೊಳ್ಳುತ್ತೇವೆ. ಎಚ್ಚರಿಕೆ ಕೊಡುವುದೆಲ್ಲ ಒಂದು ಹಂತದಲ್ಲಿ ಮುಗಿದಿದೆ. ಈಗ ಏನಿದ್ದರು ಕ್ರಮ ಆಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಖಡಕ್ ಸೂಚನೆ ಕೊಟ್ಟರು.
ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ರೌಡಿಗಳು ಪುಂಡಾಟ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಬ್ಯಾಂಕ್ ದರೋಡೆ ಪ್ರಕರಣಗಳ ತನಿಖೆಯ ಬಗ್ಗೆ ಅಧಿಕಾರಿಗಳೊಂದಿಗೆ ಕೂಲಂಕಷವಾಗಿ ಚರ್ಚೆ ಮಾಡಲಾಗಿದೆ. ಪರಿಶಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶಿಕ್ಷೆ ಪ್ರಮಾಣ ಶೇ.10ರಷ್ಟಾಗಿದೆ ಎಂದರು.