ಹುಣಸೂರು : ಸಾಮಾಜಿಕ ನ್ಯಾಯದ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ ದೇವರಾಜ ಅರಸು ಅವರ ಹುಟ್ಟೂರು ಅರಸು ಕಲ್ಲಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಳ್ಳಬೇಕಾಗಿ ಮಾಧ್ಯಮದ ಮೂಲಕ ಇನ್ಫೋಸಿಸ್ ನ ಸಂಸ್ಥಾಪಕರಾದ ಡಾ. ಸುಧಾ ಮೂರ್ತಿ ಅವರಲ್ಲಿ ಸತ್ಯ ಎಮ್ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮನವಿ ಮಾಡಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು ಶತಮಾನಗಳಿಂದಲೂ ಶೋಷಣೆಗಳನ್ನು ಅನುಭವಿಸುತ್ತಾ, ಕತ್ತಲೆಯಲ್ಲಿ ಬದುಕುತ್ತಿದ್ದ ಬಡಜನರಿಗೆ ಆತ್ಮಸ್ಥೈರ್ಯ ತುಂಬಿ ಬಡ ಜನರ ಬದುಕಿಗೆ ಬೆಳಕಾಗಿದ್ದ ಅರಸುರವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಬಡಜನರ ಹಾಗೂ ಪರಿಶಿಷ್ಟ ಜಾತಿಯ ಜನರ ಅಸ್ಪೃಶ್ಯರಂತೆ ಶೋಷಣೆ ಮಾಡುತ್ತಿದ್ದುದನ್ನು ನೋಡಿ ಇವರ ಏಳಿಗೆಗಾಗಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದರು. ಅದರಲ್ಲಿ ಪ್ರಮುಖವಾಗಿ ಉಳುವವನೇ ಭೂಮಿ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದು ಭೂಮಿಯನ್ನು ಕಳೆದುಕೊಂಡಿದ್ದ ಲಕ್ಷಾಂತರ ದಲಿತರಿಗೆ ಮತ್ತೆ ಭೂಮಿಯನ್ನು ಕೊಡಿಸಿಕೊಟ್ಟರು. ದಲಿತರು ಶತಮಾನಗಳಿಂದಲೂ ತಲೆಯ ಮೇಲೆ ಮಲಹೊರುತ್ತಿದ್ದ ಪದ್ಧತಿಯನ್ನು ರದ್ದುಪಡಿಸಿದ್ದಲ್ಲದೆ, ಜಮೀನ್ದಾರರ ಮನೆಗಳಲ್ಲಿ ಅಮಾಯಕ ಜನರು ಜೀತಗಾರಿಕೆ ಮಾಡುತ್ತಿರುವುದನ್ನು ಸಹ ಬಿಡುಗಡೆಗೊಳಿಸಿದರು. ರಾಜ್ಯದಲ್ಲಿ ನೆಲೆ ಇಲ್ಲದೆ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುತ್ತಿದ್ದ ದಲಿತ ಕುಟುಂಬಗಳಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಟ್ಟ ದೇವರಾಗಿದ್ದರು. ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಕುಟುಂಬಗಳು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅಪಾರವಾಗಿ ಶ್ರಮಿಸಿದರು.
ಇದರಿಂದಾಗಿ ಹಿಂದುಳಿದ ವರ್ಗದವರು ಸಹ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಾಯಿತು. ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನೇ ಸ್ಥಾಪಿಸಿದರು. ಈ ನಿಗಮಗಳಿಂದ ಸಾಲ ಸೌಲಭ್ಯ ದೊರೆಯುವಂತೆ ಮಾಡಿದ ಹೆಗ್ಗಳಿಕೆ ಅರಸು ಅವರದು. ಶೈಕ್ಷಣಿಕವಾಗಿ ಮಕ್ಕಳು ಅಭಿವೃದ್ಧಿ ಹೊಂದಲು ವಸತಿ ನಿಲಯಗಳನ್ನು ಸ್ಥಾಪಿಸಿದರು. ಇದರಿಂದಾಗಿ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಯಿತು.
ಈ ರೀತಿ ರಾಜ್ಯದಲ್ಲಿ ಹತ್ತು ಹಲವು ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದ ಧೀಮಂತ ನಾಯಕರಾಗಿದ್ದ ದಿವಂಗತ ಡಿ ದೇವರಾಜ ಅರಸು ಅವರು ನಮ್ಮ ಹುಣಸೂರು ತಾಲೂಕಿನವರು ಎಂಬುದು ಹೆಮ್ಮೆಯ ವಿಷಯವಾಗಿದೆ. ಆದರೆ ಇವರ ಹುಟ್ಟೂರಾದ ಅರಸು ಕಲ್ಲಹಳ್ಳಿ ಗ್ರಾಮದಲ್ಲಿರುವ ಮನೆಯು ಶಿಥಿಲಾವಸ್ಥೆಯಿಂದ ಕೂಡಿದ್ದು ಹಾಗೂ ಇವರ ಸಮಾಧಿ ಸ್ಥಳವನ್ನು ಸಹ ಅಭಿವೃದ್ಧಿಪಡಿಸಬೇಕಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಅರಸು ಅಭಿಮಾನಿಗಳು ಬಂದು ಸಮಾಧಿಗೆ ನಮಿಸಿ ಹೋಗುತ್ತಿದ್ದಾರೆ. ಆದರೆ ಅವರು ಹುಟ್ಟಿ ಬೆಳೆದ ಮನೆಯ ಶಿಥಿಲಾವಸ್ಥೆಯಿಂದ ಕೂಡಿರುವುದನ್ನು ನೋಡಿ ಮರುಕ ಪಡುತ್ತಿದ್ದಾರೆ. ಸರ್ಕಾರವು ಸಹ ಅರಸು ಕಲ್ಲಹಳ್ಳಿ ಗ್ರಾಮವನ್ನು ಪ್ರವಾಸೋದ್ಯಮವನ್ನಾಗಿ ಮಾಡುವುದೆಂದು ಘೋಷಣೆ ಮಾಡಿದೆಯಾದರೂ ಇದುವರೆಗೂ ಯಾವುದೇ ಒಂದು ಅಭಿವೃದ್ಧಿ ಕಾರ್ಯ ಕಾಣದೆ ನೆನೆಗುದಿಗೆ ಬಿದ್ದಿದ್ದು ಕೋಟ್ಯಾಂತರ ರೂಪಾಯಿಗಳ ಹಣ ದುರುಪಯೋಗ ಆಗಿದೆ. ಈ ಬಗ್ಗೆ ಅರಸು ಕುಟುಂಬಸ್ಥರು ನಮ್ಮ ಸಂಸ್ಥೆಯೊಂದಿಗೆ ಮನಬಿಚ್ಚಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಆದುದರಿಂದ ದಯಾಪರರಾದ ತಾವು ರಾಜ್ಯ ಕಂಡ ಧೀಮಂತ ನಾಯಕನ, ಸಾಮಾಜಿಕ ನ್ಯಾಯದ ಹರಿಕಾರರಾದ ದಿವಂಗತ ಡಿ ದೇವರಾಜ ಅರಸು ಅವರು ಹುಟ್ಟಿ ಬೆಳೆದ ಅರಸು ಕಲ್ಲಹಳ್ಳಿ ಗ್ರಾಮವನ್ನೇ ದತ್ತು ತೆಗೆದುಕೊಂಡು ಅವರ ಮನೆಯನ್ನು ಸುಂದರವಾದ ಮ್ಯೂಸಿಯಂ ಮಾಡಿ ಪ್ರೇಕ್ಷಣೀಯ ಪ್ರವಾಸೋದ್ಯಮ ಗ್ರಾಮವನ್ನಾಗಿ ಮಾಡಬೇಕೆಂದು ಸಂಸ್ಥೆಯ ಪರವಾಗಿ, ಅರಸು ಕುಟುಂಬಸ್ಥರ ಪರವಾಗಿ, ರಾಜ್ಯದ ಸಮಸ್ತ ಅರಸು ಅಭಿಮಾನಿಗಳ ಪರವಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.