ಮಂಗಳೂರು (ದಕ್ಷಿಣ ಕನ್ನಡ): ರಾಜ್ಯದಲ್ಲಿ ದಸರಾ ಸಂಭ್ರಮ. ಮೈಸೂರು ಬಿಟ್ರೆ ಮಂಗಳೂರು ದಸರಾ ರಾಜ್ಯದಲ್ಲಿ ಫೇಮಸ್. ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ ಅಕ್ಟೋಬರ್ 3ರವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ದತೆ ನಡೆದಿದೆ ಎಂದು ಕುದ್ರೋಳಿ ದೇಗುಲದ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ. ಅವರು ಶನಿವಾರ ಮಧ್ಯಾಹ್ನ ದೇಗುಲದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಸೆಪ್ಟೆಂಬರ್ 22ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಪುಣ್ಯಾಹ ಹೋಮ ನವಕಲಶಾಭಿಷೇಕ ನಡೆಯುತ್ತದೆ. ಪೂರ್ವಾಹ್ನ 12ಗಂಟೆಗೆ ನವದುರ್ಗೆಯರು, ಮಹಾಗಣಪತಿ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭಗೊಂಡು ಅಕ್ಟೋಬರ್ 3ರ ತನಕ ಕೇಂದ್ರದ ಮಾಜಿ ಸಚಿವರು, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಮಂಗಳೂರು ದಸರಾ (ನವರಾತ್ರಿ ಮಹೋತ್ಸವ) ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭನೆಯಿಂದ ನಡೆಯಲಿದೆ ಅಂದರು. ವೈದಿಕ ಪರಂಪರೆ, ಧಾರ್ಮಿಕ ಶ್ರದ್ಧೆ, ಸಂಸ್ಕೃತಿಯ ಸಂಭ್ರಮ, ಸಂಗೀತದ ಸಪ್ತಸ್ವರ, ಕಲೆ, ಸಾಹಿತ್ಯ, ಕ್ರೀಡಾ ಸಾಧನೆಗಳ ಏಕತೆಯ ಸಮನ್ವಯ ನವದುರ್ಗೆಯ ಆರಾಧನೆಯ ಭವ್ಯ ದಸರಾ ಈ ಬಾರಿಯ ವಿಶೇಷತೆ ಎಂದವರು ಮಾಹಿತಿ ನೀಡಿದರು.
ಸೆ.22ರಂದು ಬೆಳಗ್ಗೆ 11.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಮಂಗಳೂರು ರಾಮಕೃಷ್ಣ ಮಿಶನ್ ನ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ ಅವರ ದಿವ್ಯಹಸ್ತದಿಂದ ಬಿ.ಜನಾರ್ದನ ಪೂಜಾರಿಯವರ ಸಮ್ಮುಖದಲ್ಲಿ ಚಾಲನೆಗೊಳ್ಳಲಿದೆ ಎಂದರು.
ದೇವಸ್ಥಾನದ ಒಳಾಂಗಣದ ಮೇಲ್ಛಾವಣಿಯು ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಹೊಸಮಾದರಿಯಲ್ಲಿ ನವೀಕರಣಗೊಂಡಿದೆ. ಸೆ.21ರಂದು ಸಂಜೆ ಕ್ಷೇತ್ರದ ನವ ನಿರ್ಮಾಣದ ರೂವಾರಿ, ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿಯವರು ಉದ್ಘಾಟಿಸಲಿದ್ದಾರೆ.
ಸೆ.22ರಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಎನ್‌ಎಂಪಿಎ ಚೇರ್ಮನ್ ಡಾ.ವೆಂಕಟರಮಣ್ ಅಕ್ಕಚ್ಚುರಾಜು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ಥ ರಾಜೇಂರ್ದ ಕುಮಾರ್ ಉದ್ಘಾಟಿಸಲಿದ್ದಾರೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ ಮಂಗಳೂರು, ವೈಟ್‌ಡೌಸ್ ಮಂಗಳೂರು, ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಸೇವೆಯನ್ನು ಗುರುತಿಸಿ ಈ ಸಂದರ್ಭ ಪುರಸ್ಕರಿಸಲಾಗುತ್ತದೆ. ಭರತನಾಟ್ಯದಲ್ಲಿ ಗೊಲ್ಡನ್‌ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾದನೆಗೈದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಗೌರವಿಸಲಾಗುತ್ತದೆ ಎಂದರು.
ಸೆ.25ರಂದು ಸಂಜೆ 6ಗಂಟೆಗೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಲೋಕಸಭೆ ಸದಸ್ಯ, ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್ ಹಾಗೂ ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ಜನಾರ್ದನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ ಎಂದ ಅವರು ಸೆ.28ರಂದು ಬೆಳಗ್ಗೆ 9ಕ್ಕೆ ವಿಶ್ವ ಬಿಲ್ಲವ ಮಹಿಳಾ ಸಂಘದ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದೆ ಅಂದರು. ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿಗಳಾದ ಹರಿಕೃಷ್ಣ ಬಂಟ್ವಾಳ, ಹರೀಶ್ ಕುಮಾರ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.