ವರದಿ: ಸ್ಟೀಫನ್ ಜೇಮ್ಸ್
ಮೈಸೂರು: ‘ಅಂಬಾರಿ’ ಏರಿ ನೋಡಬನ್ನಿ ಮೈಸೂರು ದಸರಾ ಸೌಂದರ್ಯ. ಮೈಸೂರಿನ ದಸರಾ ಹಬ್ಬದ ವೇಳೆ ವಿದ್ಯುತ್ ದೀಪಾಲಂಕಾರದ ಝಗಮಗಿಸುವ ಸೌಂದರ್ಯವನ್ನು ಕಣ್ಣಾರೆ ನೋಡುವವರಿಗೆ ‘ಅಂಬಾರಿ’ ಡಬ್ಬಲ್ ಡೆಕ್ಕರ್ ಬಸ್ ಸೇವೆ ಈ ವರ್ಷವೂ ಸಿದ್ಧವಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 2020ರಿಂದ ಆರಂಭಿಸಿದ ಈ ವಿಶೇಷ ಸೇವೆ, ಈಗ ಆರು ಬಸ್ಸುಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಬಾರಿ ತುಮಕೂರು ದಸರಾಕ್ಕೆ ಒಂದು ಬಸ್ ತೆರಳುತ್ತಿರುವುದರಿಂದ, ಮೈಸೂರಿನಲ್ಲಿ ಐದು ಬಸ್ಸುಗಳಷ್ಟೇ ಸಂಚರಿಸಲಿವೆ.
ಸೆಪ್ಟೆಂಬರ್ 22ರಂದು ದಸರಾ ಉದ್ಘಾಟನೆಯ ದಿನವೇ ಈ ಸೇವೆಗೆ ಚಾಲನೆ ದೊರೆಯಲಿದ್ದು, ಅಕ್ಟೋಬರ್ 10ರವರೆಗೆ ಬಸ್ಸುಗಳು ನಗರದಲ್ಲಿ ಸಂಚರಿಸಲಿವೆ. ಹೋಟೆಲ್ ಮಯೂರ ಹೊಯ್ಸಳದಿಂದ ಪ್ರಾರಂಭವಾಗಿ ಹಳೆಯ ಡಿಸಿ ಕಚೇರಿ, ಮೈಸೂರು ವಿಶ್ವವಿದ್ಯಾಲಯ, ಕ್ರಾಫರ್ಡ್ ಹಾಲ್, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ, ಜಯಮಾರ್ತಾಂಡ ಗೇಟ್, ಕೆ.ಆರ್. ಸರ್ಕಲ್, ಸಯ್ಯಾಜಿರಾವ್ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಮುಂತಾದ ಪ್ರಮುಖ ಸ್ಥಳಗಳ ಮೂಲಕ ಒಂದು ಗಂಟೆಯ ಪ್ರದಕ್ಷಿಣೆ ಕೈಗೊಳ್ಳಲಿದೆ.
ಕಳೆದ ವರ್ಷ ದಾಖಲೆ ಸಂಖ್ಯೆಯಲ್ಲಿ ಪ್ರವಾಸಿಗರು ‘ಅಂಬಾರಿ’ ಸೇವೆಯನ್ನು ಬಳಸಿಕೊಂಡಿದ್ದರು. 12 ಸಾವಿರಕ್ಕೂ ಹೆಚ್ಚು ಮಂದಿ ದೀಪಾಲಂಕಾರ ವೀಕ್ಷಣೆಗೆ ಈ ಮೂಲಕ ನಗರದ ಸುತ್ತಾಟ ನಡೆಸಿದ್ದರು. ಈ ಬಾರಿ ಕೂಡಲೇ ಆನ್ಲೈನ್ ಬುಕ್ಕಿಂಗ್ ಆರಂಭಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಕೆಎಸ್ಟಿಡಿಸಿ ಮೈಸೂರು ಸಾರಿಗೆ ವಿಭಾಗದ ವ್ಯವಸ್ಥಾಪಕ ಕೆ.ಆರ್. ಮಧುರಾಜ್ ತಿಳಿಸಿದ್ದಾರೆ.
ಪ್ರತಿ ದಿನ ಸಂಜೆ 6.30, ರಾತ್ರಿ 8 ಹಾಗೂ 9.30ಕ್ಕೆ ಬಸ್ಸುಗಳು ಹೊರಡಲಿವೆ. ಮೇಲಿನ ಅಪ್ಪರ್ ಡೆಕ್ ಆಸನದ ದರ ₹500 ಹಾಗೂ ಕೆಳಗಿನ ಲೋಯರ್ ಡೆಕ್ ಆಸನದ ದರ ₹250 ಎಂದು ನಿಗದಿಪಡಿಸಲಾಗಿದೆ. ಆಸಕ್ತರು ಕೆಎಸ್ಟಿಡಿಸಿ ವೆಬ್ಸೈಟ್ (www.kstdc.co) ಮೂಲಕ ಮುಂಗಡ ಬುಕ್ಕಿಂಗ್ ಮಾಡಬಹುದು. ಪ್ರಯಾಣಿಕರ ಸಂಖ್ಯೆ ಆಧರಿಸಿ ಸ್ಥಳದಲ್ಲಿಯೂ ಟಿಕೆಟ್ ಪಡೆಯುವ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 0821-2423652 ಗೆ ಸಂಪರ್ಕಿಸಬಹುದು.