ವರದಿ: ಸ್ಟೀಫನ್ ಜೇಮ್ಸ್
ಬೆಂಗಳೂರು : ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ. ರಸ್ತೆ ಗುಂಡಿಗಳಿಂದ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ, ಈ ಬಗ್ಗೆ ಆಕ್ರೋಶ ಕೇಳಿಬರುತ್ತಿದ್ದರೂ ಈವರೆಗೆ ಗುಂಡಿ ಮುಚ್ಚದೆ ಇರುವುದು ಅಕ್ಷಮ್ಯ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ನಗರ ರಸ್ತೆಗಳ ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ರಸ್ತೆ ಗುಂಡಿಗಳಿಂದ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ, ಈ ಬಗ್ಗೆ ಆಕ್ರೋಶ ಕೇಳಿಬರುತ್ತಿದ್ದರೂ ಈ ವರೆಗೆ ಗುಂಡಿ ಮುಚ್ಚದೆ ಇರುವುದು ಅಕ್ಷಮ್ಯ. ಪ್ರತಿ ವಾರ್ಡ್ ನ ಎಂಜಿನಿಯರ್ ಗಳು, ಮುಖ್ಯ ಎಂಜಿನಿಯರ್ ಗಳು ಈಗಾಗಲೇ ಕ್ರಮ ವಹಿಸಬೇಕಿತ್ತು. ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲೇಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗುತ್ತಿಗೆದಾರರೊಂದಿಗೆ ಶಾಮೀಲಾಗದೆ ಒದಗಿಸಿರುವ ಅನುದಾನಕ್ಕೆ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು, ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮ ವಹಿಸಬೇಕು. ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ, ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ? ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ಇರಿಸಬೇಕು.
ಬಿಡಿಎ, ಬಿಎಂಆರ್‌ಸಿಎಲ್, ಜಲಮಂಡಳಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು.ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು, ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯ ಆಯುಕ್ತರು ಪ್ರತಿ ವಾರ ಐದೂ ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.