ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಸನಿಹವಾಗುತ್ತಿದ್ದು, ಕೇವಲ ರಾಜ್ಯ ಮಾತ್ರವಲ್ಲದೆ ಹೊರರಾಜ್ಯ ಹಾಗೂ ವಿದೇಶದಿಂದಲೂ ದಸರಾ, ಜಂಬೂ ಸವಾರಿ ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಮೈಸೂರಿಗೆ ಆಗಮಿಸುತ್ತಾರೆ. ಹೀಗಾಗಿ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಿದ್ದು, ಕೆ.ಎಸ್.ಆರ್.ಟಿ.ಸಿ ವತಿಯಿಂದ ಸುಮಾರು 2,300ಕ್ಕೂ ಹೆಚ್ಚು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿ ಬಸ್‌ಗಳ ವಿಶೇಷ ಸಾರಿಗೆ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಹೀಗಾಗಿ ಸೆಪ್ಟೆಂಬರ್ 26,27 ಮತ್ತು 30 ರಂದು ರಾಜಧಾನಿ ಬೆಂಗಳೂರಿನಿಂದ ರಾಜ್ಯ & ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2300ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಕಲ್ಪಿಸಲಿದೆ. ಅದರಂತೆ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅಕ್ಟೋಬರ್ 02 ಮತ್ತು 05 ರಂದು ವಿಶೇಷ ಬಸ್ ಗಳು ಲಭ್ಯವಿರಲಿದೆ.
ಇನ್ನು ಬೆಂಗಳೂರಿನಿಂದ ಮೈಸೂರಿಗೆ 260 ಹೆಚ್ಚುವರಿ ಬಸ್ ಗಳು ತೆರಳಲಿದ್ದು, ಮೈಸೂರಿನ ಸುತ್ತಮುತ್ತಪ್ರವಾಸಿ ತಾಣಗಳಿಗೆ ಹೆಚ್ಚುವರಿ 350 ಬಸ್ ಗಳ ವ್ಯವಸ್ಥೆ ಇರಲಿದೆ. ಹೀಗಾಗಿ ಒಟ್ಟಾರೆ 610 ದಸರಾ ವಿಶೇಷ ವಾಹನಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆದಿದೆ. ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ, ಎಂಬ ಹೆಸರುಗಳಲ್ಲಿ ವಿಶೇಷ ವಾಹನಗಳು ಸಂಚರಿಸಲಿದ್ದು, ಮೈಸೂರು- ಚಾಮರಾಜನಗರ- ಮಂಡ್ಯದ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಿದೆ.
ಇದರ ಜೊತೆಗೆ ಪ್ರಯಾಣಿಕರಿಗೆ ಮಾಹಿತಿ ಕೇಂದ್ರ ಸೇರಿದಂತೆ ಹತ್ತು ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿ ಮತ್ತು ಇ-ಟಿಕೇಟ್ ಬುಕಿಂಗ್ ಗಾಗಿ www.ksrtc.karnataka.gov.in ವೆಬ್ ಸೈಟ್ ನಲ್ಲಿ ಪರಿಶೀಲಿಸಬೇಕಾಗಿ ಸಾರಿಗೆ ಇಲಾಖೆ ತಿಳಿಸಿದೆ.