ನವದೆಹಲಿ : ನವರಾತ್ರಿ ಮೊದಲ ದಿನವೇ ದೇಶದ ಜನರಿಗೆ ಸಿಹಿಸುದ್ದಿ ಸಿಗುತ್ತಿದೆ. ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ GST ದರ ಇಳಿಸಿದ್ದು, 400 ಕ್ಕೂ ಹೆಚ್ಚು ದಿನನಿತ್ಯ ಬಳಕೆ ವಸ್ತುಗಳ ಬೆಲೆ ಕಡಿಮೆಯಾಗಲಿದೆ.
ಸೆಪ್ಟೆಂಬರ್ 22 ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದ್ದು, ಇನ್ಮುಂದೆ ಹಾಲು, ತುಪ್ಪ, ಬೆಣ್ಣೆ, ಚೀಸ್, ಬ್ರೆಡ್, ಚಪಾತಿ, ತಿಂಡಿಗಳು, ಪಾಸ್ತಾ, ನೂಡಲ್ಸ್, ಸಾಸ್‌ಗಳು, ಚಹಾ, ಕಾಫಿ ಮತ್ತು ಮಸಾಲೆಗಳು ಮೊದಲಿಗಿಂತ ಅಗ್ಗವಾಗುತ್ತವೆ.
ಅಲ್ಲದೆ ಉಕ್ಕಿನ ಪಾತ್ರೆಗಳು, ಮಣ್ಣಿನ ಪಾತ್ರೆಗಳು, ಮರದ ಮತ್ತು ಬಿದಿರಿನ ಪೀಠೋಪಕರಣಗಳು ಮತ್ತು ಬೆಂಕಿಕಡ್ಡಿಗಳು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.
ಟೂತ್‌ಪೇಸ್ಟ್, ಟೂತ್ ಬ್ರಷ್‌ಗಳು, ಸೋಪ್, ಶಾಂಪೂ, ಕೂದಲಿನ ಎಣ್ಣೆ, ಶೇವಿಂಗ್ ಕ್ರೀಮ್ ಮತ್ತು ಸೌಂದರ್ಯವರ್ಧಕಗಳ ಬೆಲೆಗಳು ಕಡಿಮೆಯಾಗುತ್ತವೆ. ಮಕ್ಕಳ ಆಟಿಕೆಗಳು, ಬೋರ್ಡ್ ಆಟಗಳು, ಪೆನ್ಸಿಲ್‌ಗಳು, ಕ್ರಯೋನ್‌ಗಳು ಮತ್ತು ಶೈಕ್ಷಣಿಕ ಕಿಟ್‌ಗಳು ಈಗ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ. ದೊಡ್ಡ ಎಲೆಕ್ಟ್ರಾನಿಕ್ಸ್ ಮತ್ತು ವಾಹನಗಳ ಮೇಲೂ ಪರಿಹಾರ ಲಭ್ಯವಿದೆ. ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟಿವಿ, ಎಸಿ, ಸ್ಕೂಟರ್, ಬೈಕ್ ಮತ್ತು ಕಾರಿನ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 3 ರಂದು ಪ್ರಮುಖ ಜಿಎಸ್‌ಟಿ ದರ ಕಡಿತ ಮತ್ತು ಸ್ಲ್ಯಾಬ್ ಬದಲಾವಣೆಗಳನ್ನು ಘೋಷಿಸಿದ್ದರು. ಹೆಚ್ಚಿನ ವಸ್ತುಗಳು 5% ಮತ್ತು 18% ತೆರಿಗೆ ದರ ವರ್ಗಕ್ಕೆ ಬಂದಿವೆ. ಹಲವಾರು ಆಹಾರ ಪದಾರ್ಥಗಳು ಈಗ 0% ಅಥವಾ ಶೂನ್ಯ ಜಿಎಸ್ಟಿ ವ್ಯಾಪ್ತಿಗೆ ಸೇರಿವೆ. ಜೀವ ಮತ್ತು ಆರೋಗ್ಯ ವಿಮೆಗಳು ಸಹ ಶೂನ್ಯ ತೆರಿಗೆ ವರ್ಗಕ್ಕೆ ಬರುತ್ತವೆ.
ಸರಿಸುಮಾರು 400 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗಿದೆ. ದುಬಾರಿ ಲೈಫ್ ಸ್ಟೈಲ್ ನಿಂದ ಬೇಸತ್ತಿದ್ದ ಜನರು ನೆಮ್ಮದಿಯ ನಿಟ್ಟುಸಿರುಬಿಡುತ್ತಿದ್ದಾರೆ.