ಮೈಸೂರು: ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ರಿಂದ ದಸರಾ ಉದ್ಘಾಟನೆ ಮಾಡಿಸಬಾರದು ಎಂದು ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅರ್ಜಿ ತಿರಸ್ಕಾರಗೊಂಡ ಬೆನ್ನಲ್ಲೇ ಸುಪ್ರೀಂಕೋರ್ಟ್ಗೂ ಹೋಗಲಾಗಿತ್ತು. ಆದರೆ, ಅಲ್ಲೂ ಅರ್ಜಿ ತಿರಸ್ಕಾರವಾಗಿತ್ತು. ಆದ್ದರಿಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ಮಾಜಿ ಸಂಸದ ಪ್ರತಾಪ್ ಸಿಂಹಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
‘ಭಾರತದಲ್ಲಿ 130 ಕೋಟಿ ಜನ ಇದ್ದಾರೆ. ಅವರಿಗೆ ಮುಕ್ತ ಧಾರ್ಮಿಕ ಆಚರಣೆಗೆ ಅವಕಾಶ ಕೊಟ್ಟಿದ್ದೇವೆ. ಇದರ ಉದ್ದೇಶ ಬಹುತ್ವ ಕಾಪಾಡುವುದು. ಗೊಂದಲಕ್ಕೆ, ಅನುಮಾನಕ್ಕೆ, ಅಪಮಾನಕ್ಕೆ ದ್ವೇಷಕ್ಕೆ ಅವಕಾಶ ಇಲ್ಲ ಎಂದು ಸಂವಿಧಾನ ಹೇಳಿದೆ. ಇದನ್ನೇ ಸುಪ್ರೀಂ ಕೋರ್ಟ್ ಹೇಳಿದೆ. ವಿರೋಧಿಗಳ ಬಾಯಿಗೆ ಸಂವಿಧಾನ ಬೀಗ ಹಾಕಿದೆ’ ಎಂದು ಮಹದೇವಪ್ಪ ಕುಟುಕಿದ್ದಾರೆ.
ವಿರೋಧಿಗಳಿಗೆ ಇನ್ನು ಮುಂದೆ ಬುದ್ಧಿ ಬರಬೇಕು. ಅತ್ಯಂತ ಪ್ರೀತಿಯಿಂದ ಎಲ್ಲರೂ ದಸರಾ ಆಚರಣೆ ಮಾಡಬೇಕು. ಎಲ್ಲರೂ ಭಾಗಿಯಾಗಿ ಅಂತ ನಾನು ಆಹ್ವಾನ ಕೊಡುತ್ತೇನೆ. ರಾಜ್ಯದಲ್ಲಿ ಜಾತಿಗಣತಿ ಬಗ್ಗೆ ಮಾತಾಡಿದ ಸಚಿವ ಎಚ್ ಸಿ ಮಹದೇವಪ್ಪ, ‘ಸ್ವಾತಂತ್ರ್ಯಕ್ಕಿಂತ ಮುಂಚೆಯ ವರ್ಣಾಶ್ರಮ ಮಾಡುತ್ತಿದ್ದಾರೆ. ಬಿಜೆಪಿಗೆ ಇದರಲ್ಲಿ ನಂಬಿಕೆ ಇದೆ. ನಾವು ಜಾತಿಗಣತಿ ಮಾಡುತ್ತಿರುವುದು ಪ್ರತಿಪ್ರಜೆಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಬದುಕು ಹೇಗಿದೆ ಅಂತ ತಿಳಿದುಕೊಳ್ಳೋದಕ್ಕೆ. ಇದರಲ್ಲಿ ಬಿಜೆಪಿ ವಿರೋಧ ಮಾಡೋದಕ್ಕೆ ಏನಿದೆ’ ಎಂದು ಪ್ರಶ್ನಿಸಿದ್ದಾರೆ.
‘ಇರುವ ಜಾತಿಗಳನ್ನು ಸಮೀಕ್ಷೆ ಮಾಡುತ್ತಿದ್ದೇವೆ. ನಾವು ಯಾವ ಜಾತಿಯನ್ನೂ ಹುಟ್ಟು ಹಾಕುತ್ತಿಲ್ಲ. ಹಿಂದೂಗಳನ್ನು ಯಾರೂ ಟಾರ್ಗೆಟ್ ಮಾಡುತ್ತಿಲ್ಲ. ಇದು ಬಿಜೆಪಿ ಹೇಳುವ ಅಪ್ಪಟ ಸುಳ್ಳು. ಹಿಂದೂ ಧರ್ಮ ಒಡೆಯುವ ಪ್ರಮೇಯ ನಮಗೆ ಇಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ಸಾಯುವಾಗ ಹಿಂದೂವಾಗಿ ಸಾಯಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ಹಾಗಾದರೆ ಹಿಂದೂ ಧರ್ಮದಲ್ಲಿ ಏನಿದೆ?’ ಎಂದು ಮಹದೇವಪ್ಪ ಪ್ರಶ್ನೆ ಮಾಡಿದ್ದಾರೆ.
‘ಬಲವಂತವಾಗಿ ಮತಾಂತರ ತಪ್ಪು. ಅದು ಅವರ ಹಕ್ಕು. ಸಚಿವ ಸಂಪುಟದಲ್ಲಿ ಯಾವ ಒಡಕೂ ಇರಲಿಲ್ಲ. ಒಮ್ಮತದ ತೀರ್ಮಾನದ ಮೇಲೆ ನೂತನ ಸಮೀಕ್ಷೆ ಮಾಡುತ್ತಿದ್ದೇವೆ. ಲಿಂಗಾಯತ ಒಕ್ಕಲಿಗ ಸಮುದಾಯದವರು ಅವರವರ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ’ ಎಂದಿದ್ದಾರೆ.
ಭಾನು ಮುಸ್ತಾಕ್ ದಸರಾ ಉದ್ಘಾಟನೆ ಬಗ್ಗೆ ಮಡಿಕೇರಿಯಲ್ಲಿ ಸಂಸದ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ. ‘ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಲಾಗಿತ್ತು. ನಾವು ನ್ಯಾಯಾಲಯಕ್ಕೆ ಹೋಗಿಲ್ಲ. ಆದರೆ ನಮ್ಮ ಹೋರಾಟ ಮುಂದುವರೆಯುತ್ತೆ. ಭುವನೇಶ್ವರಿಗೆ ಆಕ್ಷೇಪ ವ್ಯಕ್ತಪಡಿಸಿದಕ್ಕೆ ನಮ್ಮ ವಿರೋಧವಿದೆ. ಅದಕ್ಕೆ ಮೊದಲು ಸ್ಪಷ್ಟೀಕರಣ ನೀಡಲಿ. ಹಿಂದೂ ಭಾವನೆಗೆ ಧಕ್ಕೆ ಕೊಡದೆ ಬರಲಿ ಎಂಬುದು ನಮ್ಮ ಉದ್ದೇಶ, ಎಲ್ಲಾವನ್ನು ಜನರು ಗಮನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ



