ಮಂಗಳೂರು (ದಕ್ಷಿಣ ಕನ್ನಡ) ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಮತ್ತು ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಡುವಿನ ಭೇಟಿಯ ಹಳೆಯ ಒಂದು ವಿಡಿಯೋ ಮೊನ್ನೆ ವೈರಲ್ ಆದ ಬಳಿಕ ಈಗ 2 ಮತ್ತು 3ನೇ ವಿಡಿಯೋ ಹೊರಗೆ ಬಂದಿದ್ದು, ವೈರಲ್ ಆಗಿವೆ.
ಈ ಎರಡೂ ವಿಡಿಯೋಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳನ್ನು ಹೂತಿದ್ದೇನೆ, ಎಲ್ಲವೂ ಅನಾಥ ಶವಗಳು. ತರಕಾರಿ ಗಾಡಿಯಲ್ಲೂ ತಂದು ಹೂಳಿದ್ದೇನೆ. 1 ರಿಂದ 17 ಪಾಯಿಂಟ್‌ವರೆಗೆ ಶವಗಳು ಇರುವ ಬಗ್ಗೆ ಚಿನ್ನಯ್ಯ ಹೇಳುತ್ತಿರುವುದು ವಿಡಿಯೋದಲ್ಲಿದೆ. ನಾನು ಹೂಳಿದ ಶವಗಳಿಗೆ ಲೆಕ್ಕವಿಲ್ಲ ಎಂದು ಚಿನ್ನಯ್ಯ ಮಾತನಾಡಿರುವುದು ಸಂಭಾಷಣೆಯಲ್ಲಿ ಕಂಡುಬರುತ್ತದೆ. ಈ ವಿಡಿಯೋದ ಅಸಲಿಯತ್ತು ಸ್ಪಷ್ಟವಾಗಿಲ್ಲ. ಇದು ಎರಡು ವರ್ಷ ಹಿಂದಿನದ್ದು ಎಂದಿದ್ದರೂ ಅಲ್ಲಿ ಕಂಡುಬರುವ ಹ್ಯಾಂಡ್‌ವಾಷ್ 2025 ಜೂನ್ ತಿಂಗಳನ್ನು ತೋರಿಸುತ್ತಿರುವುದನ್ನು ಯಾರೋ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅದು ಕೂಡ ವೈರಲ್ ಆಗಿದೆ.
ನಾನು ಧರ್ಮಸ್ಥಳ ಗ್ರಾಮದಲ್ಲಿ ರಾಶಿ ರಾಶಿ ಶವಗಳನ್ನು ತರಕಾರಿ ತಳ್ಳುವ ಗಾಡಿಯಲ್ಲಿ ಸಾಗಿಸಿ ಹೂತಿದ್ದೇನೆ. ಸ್ನಾನ ಘಟ್ಟದ ಬಳಿ ಶವಗಳನ್ನು ಹೂತಿದ್ದಕ್ಕೆ ಲೆಕ್ಕವೇ ಇಲ್ಲ ಅಷ್ಟು ಹೂತಿದ್ದೇನೆ. ಶಾಲೆಯ ಹಿಂದೆ ಮನೆಯ ಬಳಿ ಯುವತಿಯ ಶವ ಇತ್ತು. ಆಕೆ ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ. ಅವಳ ಸಾವಿಗೆ ಕುಟುಂಬದವರು ಯಾರೂ ಅಳುತ್ತಿರಲಿಲ್ಲ. ಆ ಶವವನ್ನು ನಾನೇ ಹೂತು ಹಾಕಿದೆ ಎಂದು ಚಿನ್ನಯ್ಯ ಹೇಳುತ್ತಿರುವುದು 2ನೇ ವಿಡಿಯೋದಲ್ಲಿದೆ. ಇದೇ ವಿಡಿಯೋದಲ್ಲಿ ಅನಾಥ ಶವಗಳ ಬಗ್ಗೆ ಕಾಡಿನಲ್ಲಿ ಗುರುತಿಸಿದ ಸ್ಪಾಟ್ ನಂ.13ರ ಬಗ್ಗೆಯೂ ಉಲ್ಲೇಖಿಸಲಾಗಿದೆ.