ಬೆಂಗಳೂರು: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ವಾರ್ಡ್ ನಲ್ಲಿ ಕೆಲಚಂದ್ರ ಫೌಂಡೇಷನ್ ವತಿಯಿಂದ ವಿವಿಧ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಫೌಂಡೇಷನ್ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಹಾಗೂ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಹಾಗೂ ಅವರ ಪತ್ನಿ ಸುಜಾ ಜಾರ್ಜ್ ಅವರು ಪ್ರಮಾಣಪತ್ರಗಳನ್ನು ವಿತರಿಸಿದರು.
ಅಲ್ಪಸಂಖ್ಯಾತ ಮತ್ತು ಹಿಂದುಳಿದವರ್ಗದವರೇ ಹೆಚ್ಚಾಗಿರುವ ಸರ್ವಜ್ಞನಗರ ಕ್ಷೇತ್ರದಲ್ಲಿ ಅಗತ್ಯ ಮೂಲ ಸೌಕರ್ಯ, ಶಿಕ್ಷಣದ ಜತೆಗೆ ಆರೋಗ್ಯ ಮತ್ತು ಕೌಶಲ್ಯಕ್ಕೆ ಒತ್ತು ನಡುತ್ತಿರುವ ಕೆಲಚಂದ್ರ ಫಂಡೇಷನ್, 219ರಿಂದ ಕೌಶಲ್ಯ ತರಬೇತಿ ಕೇಂದ್ರ ನಡೆಸುತ್ತಿದ್ದು, ಈ ಕೇಂದ್ರದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಮಾಣಪತ್ರ ವಿತರಿಸಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, “ಫೌಂಡೇಷನ್ ವತಿಯಿಂದ ನಿರಂತರವಾಗಿ ಮನೆ ಮನೆ ಸಮೀಕ್ಷೆಯೊಂದಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಕಂಪ್ಯೂಟರ್ ಕಲಿಕೆ, ಹೊಲಿಗೆ ಕೌಶಲ್ಯ, ಆರ್ಟ್ ಕ್ರಾಫ್ಟ್ ವಿಭಾಗದಲ್ಲಿ ವಿಶೇಷವಾಗಿ ಮೂರು ತಿಂಗಳು ಮತ್ತು ಆರು ತಿಂಗಳ ತರಬೇತಿ ನಡೆಸುತ್ತಿದ್ದು, 2000 ಕ್ಕೂ ಹೆಚ್ಚು ಮಹಿಳೆಯರಿಗೆ ಕೌಶಲ್ಯ ತರಬೇತಿ ಒದಗಿಸಿದೆ, ಸ್ವಾವಲಂಬನೆಯ ಜೀವನಕ್ಕೆ ನೆರವಾಗಿದೆ,” ಎಂದು ಹೇಳಿದರು.
“ಭಾಷಣ ಮಾಡುವ ಜನಪ್ರತಿನಿಧಿ ನಾನಲ್ಲ, ವಿಶೇಷವಾಗಿ ಶಿಕ್ಷಣ, ಕೌಶಲ್ಯ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಫೌಂಡೇಷನ್ ಮೂಲಕ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಫೌಂಡೇಷನ್ ವತಿಯಿಂದ ಕಾಡುಗೊಂಡನಹಳ್ಳಿಯಲ್ಲಿ ಮೊದಲ ಕೌಶಲ್ಯ ತರಬೇತಿ ಕೇಂದ್ರ ಆರಂಭ ಮಾಡಲಾಯಿತು. ಇದೀಗ ಜೀವನಹಳ್ಳಿ ವಾರ್ಡ್ ನಲ್ಲೂ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕೆ.ಜೆ.ಹಳ್ಳಿ ಕೌಶಲ್ಯ ಕೇಂದ್ರ ಮಾದರಿ ಕೇಂದ್ರವಾಗಿದೆ. 2000 ಕ್ಕೂ ಹೆಚ್ಚಿನ ಮಹಿಳೆಯರು ತರಬೇತಿ ಪೂರ್ಣಗೊಳಿಸಿದ್ದಾರೆ,” ಎಂದರು.
“ಮುಂದಿನ ಕೆಲವೇ ದಿನಗಳಲ್ಲಿ ಹೆಚ್.ಬಿ.ಆರ್. ಬಡಾವಣೆಯಲ್ಲಿ ನೂತನ ಆಸ್ಪತ್ರೆ ಲೋಕಾರ್ಪಣೆ ಬಳಿಕ ಎರಡು ಅಂತಸ್ತಿನ ಕೌಶಲ್ಯ ಕೇಂದ್ರ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ. ಸುಜಾ ಜಾರ್ಜ್ ಅವರೂ ಹೆಚ್ಚಿನ ಮುತುವರ್ಜಿವಹಿಸಿ ಕೌಶಲ್ಯ ಹಾಗೂ ಆರೋಗ್ಯ ಸುಧಾರಣೆಗೆ ಮುಂದಾಗಿದ್ದಾರೆ,” ಎಂದು ತಿಳಿಸಿದರು.
“ಕೆ.ಜೆ.ಹಳ್ಳಿ ಕೌಶಲ್ಯ ತರಬೇತಿ ಕೇಂದ್ರವು ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಅಲ್ಲದೆ, ಇಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿ 37,000ಕ್ಕೂ ಹೆಚ್ಚು ಜನರಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗಿದೆ. ಡಯಾಬಿಟಿಸ್ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧ ನೀಡುತ್ತಿದ್ದು, ಮಹತ್ವದ ಆರೋಗ್ಯ ಸುಧಾರಣೆಗೆ ನಾಂದಿಯಾಗಿದೆ,” ಎಂದು ಹೇಳಿದರು.
ಕೆಲಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಂಚಾಲಕರಾಗಿರುವ ಡಾ.ಬಿ.ಎಸ್.ತ್ರಿವೇಣಿ ಮಾತನಾಡಿ, “ಇಂಟಿಗ್ರೇಟೆಡ್ ಮೆಡಿಕಲ್ ಸೆಂಟರ್ ಆಗಿ ಆರಂಭಗೊಂಡ ಕೆ.ಜೆ.ಹಳ್ಳಿ ಕೇಂದ್ರ ಇಂದು ಸಮರ್ಥ ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿದೆ. ಟೈಲರಿಂಗ್, ಎಂಬ್ರಾಯಿಡರಿ, ಕಂಪ್ಯೂಟರ್ ಕಲಿಕೆ ಮತ್ತು ಆರ್ಟ್ ಅಂಡ್ ಕ್ರಾಫ್ಟ್ ತರಬೇತಿ ಮತ್ತು ಸ್ವಾವಲಂಬಿ ಜೀವನಕ್ಕೆ ನೆರವಾಗಿದೆ. ಮೂರು ತಿಂಗಳ ಕಂಪ್ಯೂಟರ್ ಕಲಿಕೆ, ಆರು ತಿಂಗಳ ಹೊಲಿಗೆ, ಎಂಬ್ರಾಯಿಡರಿ ತರಬೇತಿಯನ್ನು ಫೌಂಡೇಷನ್ ನಡೆಸುತ್ತಿದೆ. ಪ್ರಸ್ತುತ 2000 ಕ್ಕೂ ಹೆಚ್ಚಿನ ಮಹಿಳೆಯರು ತರಬೇತಿ ಪಡೆದಿದ್ದಾರೆ. ಕಂಪ್ಯೂಟರ್ ಕಲಿಕೆ ನಂತರ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ,” ಎಂದು ಮಾಹಿತಿ ನೀಡಿದರು.
ಪ್ರಮಾಣಪತ್ರ ಪಡೆದ ಬಳಿಕ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು, ಕೆಲಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರ ನೆರವಿಗೆ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಫೌಂಡೇಷನ್ ಉಪಾಧ್ಯಕ್ಷರಾದ ಸುಜಾ ಜಾರ್ಜ್, ಕಾಡುಗೊಂಡನಹಳ್ಳಿ ವಾರ್ಡ್ ಮುಖಂಡರು, ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ರಸ್ತೆಗಳ ಸ್ಥಿತಿಗತಿ ಸಮೀಕ್ಷೆಗೆ ಸಚಿವ ಕೆ.ಜೆ.ಜಾರ್ಜ್ ಸೂಚನೆ: ಬಳಿಕ ಬಾಣಸವಾಡಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಿದ ಸಚಿವ ಕೆ.ಜೆ.ಜಾರ್ಜ್, ಕ್ಷೇತ್ರದ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಸಚಿವರು ರಸ್ತೆ ಸ್ತಿತಿಗತಿಯ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.
ಕ್ಷೇತ್ರದಲ್ಲಿ ಹದಗೆಟ್ಟ ರಸ್ತೆಗಳ ಸುಧಾರಣೆ ಮಾಡಿ, ಗುಂಡಿಗಳನ್ನು ವೈಜ್ಞಾನಿಕ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ರಸ್ತೆಗಳ ಸಮೀಕ್ಷಾ ವರದಿ ಪರಿಶೀಲಿಸಿದ ಸಚಿವರು, ನೆಪ ಹೇಳದೆ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿ. ಖುದ್ದಾಗಿ ರಸ್ತೆಗಳ ಪರಿಶೀಲನೆ ನಡೆಸುವುದಾಗಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.