ಶಿವಮೊಗ್ಗ : ಕರ್ತವ್ಯದಲ್ಲಿ ನಿರ್ಲಕ್ಷ, ಲಂಚಕ್ಕೆ ಬೇಡಿಕೆ ಆರೋಪ ಹಿನ್ನೆಲೆಯಲ್ಲಿ, ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ತಹಶೀಲ್ದಾರ್ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು, ಶಿವಮೊಗ್ಗದ ತಹಶೀಲ್ದಾರ್ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ದಾವಣಗೆರೆ, ಚಿತ್ರದುರ್ಗದಿಂದ ಬಂದಿದ್ದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನಾಲ್ಕು ತಂಡ ಹಾಗೂ ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಅಧಿಕಾರಿಗಳನ್ನೊಳಗೊಂಡ ನಾಲ್ಕು ತಂಡ ಕಾರ್ಯಾಚರಣೆ ನಡೆಸಿದೆ.
ಇನ್ನು ದಾಳಿಯ ವೇಳೆ ಪರಿಹಾರವಾಗದೇ ಇರುವ ಸಾರ್ವಜನಿಕರ ಅಹವಾಲು, ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ವಿವರ, ಬಾಕಿ ಇರುವ ಕಡತಗಳು, ಸುದೀರ್ಘ ಕಾಲದಿಂದ ಬಾಕಿ ಉಳಿಸಿಕೊಂಡಿರುವುದಕ್ಕೆ ಕಾರಣ, ಹಕ್ಕು ಬದಲಾವಣೆ, ಭೂ ಮಂಜೂರಾತಿ, ಭೂಮಿ, ಬಗರ್‌ಹುಕುಂ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳ ಪರಿಶೀಲನೆ ನಡೆಸಿದರು.