ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ, ಇದರ ನಡುವೆಯೇ ದೇವಸ್ಥಾನಕ್ಕೆ ಸೂತಕದ ಛಾಯೆ ಆವರಿಸಿದ್ದು, ಚಾಮುಂಡಿ ಬೆಟ್ಟದ ಶಿವಾರ್ಚಕರು ನಿಧನರಾಗಿದ್ದಾರೆ. ಈ ಹಿನ್ನೆಲೆ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ನಿರ್ಬಂಧಿಸಲಾಗಿದೆ..
ಮೃತರನ್ನು ಶಿವಾರ್ಚಕ ವಿ. ರಾಜು ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ದೇವಸ್ಥಾನದಲ್ಲಿ ಶಿವಾರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಈ ಹಿನ್ನಲೆ ಇಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ದೇವಿ ದರ್ಶನ ಬಂದ್ ಮಾಡಲಾಗಿದೆ.
ಮಧ್ಯಾಹ್ನ ರಾಜು ಅವರ ಸಂಸ್ಕಾರ ಮುಗಿದ ಬಳಿಕ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ನವರಾತ್ರಿ, ದಸರಾ ಹಿನ್ನಲೆ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಜನ ಆಗಮಿಸುತ್ತಾರೆ. ಇದೀಗ ದಿಢೀರ್ ಆಗಿ ದೇವಿ ದರ್ಶನ ಬಂದ್ ಮಾಡಿದ್ದು, ಭಕ್ತರಿಗೆ ತೊಂದರೆ ಉಂಟಾಗಿದೆ.
ಇನ್ನು ಇತ್ತ ಅರಮನೆಯಲ್ಲಿ ಎರಡನೇ ದಿನದ ಖಾಸಗಿ ದರ್ಬಾರ್ ನಡೆಯುತ್ತಿದ್ದು, ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಹಸುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಮಾಡಿದ್ದಾರೆ. ಅರಮನೆ ಅಂಗಳದಲ್ಲಿ ಒಂದು ಸುತ್ತು ಸುತ್ತಿ ಅರಮನೆ ಅಂಗಳದಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.