ಬೆಂಗಳೂರು : ಜಾತಿ ಸಮೀಕ್ಷೆ ಸದ್ಯ ಕರ್ನಾಟಕದಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಲ್ಲಿಯೇ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಇದೀಗ ಒಕ್ಕಲಿಗರು ಹೊಸ ಹೆಜ್ಜೆ ಇಟ್ಟಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ ಮುಖಂಡರ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿದೆ. ರಾಜ್ಯ ಒಕ್ಕಲಿಗ ಮೀಸಲಾತಿ ಸಮಿತಿಯ ಮುಖ್ಯ ಸಂಚಾಲಕ ನಾಗರಾಜ್ ಯಲಚವಾಡಿ ನೇತೃತ್ವದಲ್ಲಿ ಖರ್ಗೆ ಅವರನ್ನು ಭೇಟಿ ಮಾಡಿದ ನಿಯೋಗವು ಮನವಿ ಸಲ್ಲಿಕೆ ಮಾಡಿದೆ.
ರಾಜ್ಯದಲ್ಲಿ ಸುಮಾರು 800 ಜಾತಿಗಳಿದ್ದವು. ಈಗ ಹಿಂದುಳಿದ ವರ್ಗಗಳ ಆಯೋಗವು 1,561 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಯಾವುದೇ ವಿಚಾರಣೆ ಅಥವಾ ಅಧ್ಯಯನಗಳಿಲ್ಲದೆ ಜಾತಿಗಳನ್ನು ಸೇರಿಸಲಾಗಿದೆ ಎಂದು ಖರ್ಗೆಗೆ ದೂರು ನೀಡಿದ್ದಾರೆ.
ಸರ್ಕಾರವು ಸಮೀಕ್ಷಾ ಅಪ್ಲಿಕೇಶನ್‌ನಲ್ಲಿ ಸರಿಯಾದ ತರಬೇತಿಯನ್ನು ನೀಡಿಲ್ಲ ಎಂದು ಆಯೋಗದ ಸದಸ್ಯರು ಖರ್ಗೆ ಗಮನಕ್ಕೆ ತಂದಿದ್ದು,ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ನವರಾತ್ರಿ ಸಂಭ್ರಮ ನಡೆಯುತ್ತಿದೆ. ಹೀಗಾಗಿ ತಕ್ಷಣಕ್ಕೆ ಯಾವುದೇ ಸಮೀಕ್ಷೆ ಬೇಡ. 1 ತಿಂಗಳ ಬಳಿಕ 60 ದಿನಗಳ ಕಾಲ ಸಮೀಕ್ಷೆ ನಡೆಸಬೇಕು ಎಂದು ನಿಯೋಗ ಹೇಳಿದೆ.
ಇನ್ನು, ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್ಥಿಕ ಹಾಗೂ ಸಾಮಾಜಿಕ ಸಮೀಕ್ಷೆ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಸಿದ್ದರಾಮಯ್ಯ ನಾಟಕ ಆಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಸಿಎಂ ಸಿದ್ದರಾಮಯ್ಯ ಮುಸ್ಲಿಂ ಪರ ಇದ್ದಾರೆ.ಜಾತಿಗಣತಿ ಬಗ್ಗೆ ಅವರ ಸಚಿವ ಸಂಪುಟದಲ್ಲೇ ಗೊಂದಲ ಉಂಟಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಜಾತಿಗಣತಿಯನ್ನು ಕೈಬಿಡಬೇಕು ಎಂದು ಹೇಳಿದರು.