Wednesday, September 24, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರದಲ್ಲಿ ದಸರಾ ಸಂಭ್ರಮ: ಸಂಸ್ಕೃತಿ, ಕಲೆ ಮತ್ತು ಆಧ್ಯಾತ್ಮದ ಮೇಳ

ಚಾಮರಾಜನಗರದಲ್ಲಿ ದಸರಾ ಸಂಭ್ರಮ: ಸಂಸ್ಕೃತಿ, ಕಲೆ ಮತ್ತು ಆಧ್ಯಾತ್ಮದ ಮೇಳ

ಚಾಮರಾಜನಗರ: ದಸರಾ ಸಂಭ್ರಮವು ಜನರ ಉತ್ಸವ ವಾಗಿದ್ದು, ಕಲೆ, ಸಾಹಿತ್ಯ ,ಸಂಗೀತ ನೃತ್ಯ, ನಾಟಕ ,ಕ್ರೀಡೆ ,ಕುಸ್ತಿ ಹತ್ತು ಹಲವು ಕಲಾ ಪ್ರಕಾರಗಳ ಪ್ರತಿಭಾ ಅನಾವರಣಕ್ಕೆ ಸಾಕ್ಷಿಯಾಗಿದೆ. ದಸರಾ ಸಂದರ್ಭದಲ್ಲಿ ನವದುರ್ಗೆಯರ ಸ್ಮರಣೆಯಿಂದ ಮನಸ್ಸು ಸಂತೋಷಗೊಂಡು ಇಡೀ ಕುಟುಂಬ ಮತ್ತು ವಾತಾವರಣ ಪರಿಶುದ್ಧವಾಗಿ ಸಂಭ್ರಮಿಸುವ ಕಾಲವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು , ಸಂಸ್ಕೃತಿ ಚಿಂತಕರು ಆದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ನವರಾತ್ರಿ ಸಂಭ್ರಮ ಕುರಿತು ಮಾತನಾಡುತ್ತಾ ನೂರಾರು ಕವಿಗಳು ,ಸಾಹಿತಿಗಳು, ಜ್ಞಾನಿಗಳು ನವರಾತ್ರಿ ಕುರಿತು ಸಾವಿರಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಪ್ರತಿ ರಾಜ್ಯಗಳಲ್ಲೂ ದುರ್ಗೆಯ ಸ್ಮರಣೆ ವಿಭಿನ್ನವಾಗಿದ್ದು, ಆಯಾ ಸಂಸ್ಕೃತಿ, ಪರಂಪರೆ ವಿಭಿನ್ನತೆಯ ಮೂಲಕ ಜನರು ಆನಂದದ ಸಾಗರದಲ್ಲಿ ಇರುತ್ತಾರೆ. ಪ್ರತಿಯೊಬ್ಬ ಮನುಷ್ಯನಿಗೂ ದೈವಿಕ ಪ್ರಜ್ಞೆ, ಆಧ್ಯಾತ್ಮಿಕ ಚಿಂತನೆ ಸದಾಕಾಲ ಅಗತ್ಯ. ಸಮಗ್ರ ಜ್ಞಾನ ವಿಕಾಸವಾಗಲು ಸಾಹಿತ್ಯದ ಅಧ್ಯಯನ ತುಂಬಾ ಅಗತ್ಯವಾಗಿದೆ. ಸಾಹಿತ್ಯದ ಮೂಲಕ ಜೀವನವನ್ನು ಸಂತೃಪ್ತಿಗೊಳಿಸಿಕೊಳ್ಳಬಹುದು. ಸಾಹಿತ್ಯ ,ನಾಟಕ ,ಸಂಗೀತ ಕ್ಷೇತ್ರಗಳು ಮನಸ್ಸಿನ ಶಾಂತಿಗೆ ಕಾರಣವಾಗಿದೆ. ಮೈಸೂರು ದಸರಾ ಸಂಭ್ರಮ ಎಲ್ಲಾ ಕಡೆ ವಿಜೃಂಭಿಸುತ್ತಿದೆ.

ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರು, ಜಯಚಾಮರಾಜ ಒಡೆಯರು ಮುಮ್ಮಡಿ ಕೃಷ್ಣರಾಜ ಒಡೆಯರು ಸಮಗ್ರ ಮೈಸೂರು ಪರಂಪರೆಗೆ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕನ್ನಡ ನಾಡಿನ ಸಾಹಿತ್ಯ ಕಲೆ ಸಂಗೀತ ,ನೃತ್ಯ ,ಕಲೆ, ವಾಸ್ತು ಶಿಲ್ಪ ವಿಕಾಸವಾಗಲು ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದೆ . ನೂರಾರು ಸಾಹಿತಿಗಳಿಗೆ ಸಂಗೀತಗಾರರಿಗೆ ಕಲಾವಿದರಿಗೆ ಆಶ್ರಯದಾತರಾಗಿದ್ದರು.ಅಭಿವೃದ್ಧಿ ಒಂದು ಕಡೆಯಾದರೆ ಮಾನವನ ಅಂತರಂಗದ ವಿಕಾಸದ ಕಲೆ ವಿಕಾಸ ಮತ್ತೊಂದು ಮೈಲಿಗಲ್ಲು. ಮೈಸೂರು ಸಂಸ್ಥಾನದ ಮಹಾರಾಜರು ಸ್ವತಹ ವಿದ್ವಾಂಸರಾಗಿದ್ದು ನೂರಾರು ಪುಸ್ತಕಗಳನ್ನು ಶ್ಲೋಕಗಳನ್ನು ರಚಿಸಿದ್ದಾರೆ. ಪ್ರತಿಯೊಬ್ಬರು ದೈವಿಕ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಿ . ಮನಸ್ಸು ವಿಕಾಸವಾಗಲಿ.

ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಲು ಸರ್ವರನ್ನು ಗೌರವಿಸಿ, ಪ್ರೀತಿಸಿ. ಅಹಂಕಾರವನ್ನು ತ್ಯಜಿಸಲು ದೇವಿಯ ಪ್ರಾರ್ಥನೆಯನ್ನು ಸರ್ವರು ಮಾಡೋಣ. ಜಾತಿ, ಮತ ಪಂಥ, ಕುಲಭೇದವಿಲ್ಲದೆ ಸರ್ವರು ಒಂದಾಗೋಣ. ಹಬ್ಬಗಳು ನಮ್ಮೆಲ್ಲರನ್ನು ಒಂದುಗೂಡಿಸುತ್ತದೆ, ಪ್ರತಿ ಹಳ್ಳಿ ಹಳ್ಳಿಗಳಲ್ಲೂ ದೇವಾಲಯಗಳು ದಸರಾ ಸಂದರ್ಭದಲ್ಲಿ ಪೂಜಿಸಲ್ಪಡುತ್ತವೆ ಜನರು ಸಂತೃಪ್ತ ರಾಗಲು ಆಧ್ಯಾತ್ಮಿಕ ಮಾರ್ಗ ಅನಿವಾರ್ಯ. ಜ್ಞಾನದ ವಿಕಾಸಕ್ಕೆ ಸಾಹಿತ್ಯದ ಕೊಡುಗೆ ಅಪಾರವೆಂದು ತಿಳಿಸಿದರು.

ಕರ್ನಾಟಕ ಗಮಕ ಕಲಾ ಪರಿಷತ್ತಿನ ವಾಸಂತಿ ವಸೂಪಾಲ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ದಸರಾ ಸಂದರ್ಭದಲ್ಲಿ ಮೈಸೂರು ಮಹಾರಾಜರ ಕೊಡುಗೆಗಳ ಕುರಿತು ವಿಶೇಷ ಕಾರ್ಯಕ್ರಮ ರೂಪಿಸಿರುವುದು ಹೆಮ್ಮೆಯಾಗಿದೆ. ಚಾಮರಾಜನಗರ ಮೈಸೂರು ಪರಂಪರೆಯ ಪ್ರಾಂತ್ಯ ವಾಗಿದ್ದು ಮೈಸೂರು ಮಹಾರಾಜರು ಸಮಗ್ರ ವಿಕಾಸಕ್ಕೆ ಕಾರಣೀಭೂತರಾಗಿದ್ದಾರೆ. ನವ ದುರ್ಗೆಯರ ಸ್ಮರಣೆ ಸರ್ವರನ್ನು ಸ್ಪೂರ್ತಿಯಿಂದ ಬದುಕಲು ಸಹಕಾರಿಯಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ ಮಾತನಾಡಿ ದಸರಾ ಉತ್ಸವಕ್ಕೆ ಮೈಸೂರು ವಿಶ್ವ ಪ್ರಸಿದ್ಧವಾಗಿದೆ. ದಸರಾ ಸರ್ವರನ್ನು ಸಂತೋಷಗೊಳಿಸುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮ ಪುರುಷೋತ್ತಮ್, ಬಿಕೆ ಆರಾಧ್ಯ, ಕುಮಾರ್ ,ಮಹೇಶ್ ,ಚಿಂತಾಮಣಿ, ಪ್ರಕಾಶ ,ನಾಗರಾಜು, ಉಮೇಶ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular