ಚಾಮರಾಜನಗರ: ನವರಾತ್ರಿಯಲ್ಲಿ ದೇವಿ ಆರಾಧನೆಯನ್ನು ವಿಧಿ ವಿಧಾನಗಳ ಮೂಲಕ ಬಹಳ ಭಕ್ತಿಯಿಂದಪೂಜಿಸುವ ನವರಾತ್ರಿಯಲ್ಲಿ ಎಲ್ಲ ಕಡೆ ಸಾತ್ವಿಕ ವಾತಾವರಣ ಇರುತ್ತದೆ ಎಂದು ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿಕೆ ದಾನೇಶ್ವರಿ ರವರು ತಿಳಿಸಿದರು.
ಅವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಶಿವ ಶಕ್ತಿ ನಾರಿಯರು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ರಾಕ್ಷಸರ ಉಪಟಳ ಹೆಚ್ಚಾದಾಗ ಧರ್ಮ ರಕ್ಷಣೆಗಾಗಿ ನವಶಕ್ತಿಯರ ರೂಪದಿಂದ ಸಂರಕ್ಷಿಸಿ ರಕ್ಷಿಸಲಾಯಿತು . ಪ್ರತಿ ಶಕ್ತಿಗೂ ವಿಶೇಷವಾದ ವಾಹನಗಳು, ಆಯುಧಗಳು ,ಮೂಲಕ ರಾಕ್ಷಸ ಸಂಹಾರವಾಗಿ ಪರಮಾತ್ಮನ ದಿವ್ಯ ಸಂದೇಶವನ್ನು ನೀಡುವ ಮೂಲಕ ನವಶಕ್ತಿಯ ಆರಾಧನೆಗೆ ಹೆಚ್ಚು ಮಹತ್ವವಿದೆ.
ನವರಾತ್ರಿಯಲ್ಲಿ ವಿಶೇಷವಾಗಿ ಸಾಧಕರು ಧ್ಯಾನಸಕ್ತರಾಗಿ ಮೌನ ವ್ರತದ ಮೂಲಕ ಉಪವಾಸ ವ್ರತ, ಪೂಜೆ, ದಾನ ಕಾರ್ಯಗಳಲ್ಲಿ ತೊಡಗುತ್ತಾರೆ. ಅಜ್ಞಾನವನ್ನು ಕಳೆದು ಜ್ಞಾನದ ಬೆಳಕನ್ನು ರೂಪಿಸುವ ನವರಾತ್ರಿ ಶಕ್ತಿಯ ರೂಪವಾಗಿದೆ. ಪ್ರತಿಯೊಬ್ಬರು ಧರ್ಮ ಗ್ರಂಥಗಳ ಅಧ್ಯಯನವನ್ನು ಮಾಡಬೇಕು ಎಂದು ತಿಳಿಸಿದರು.
ಉದ್ಘಾಟನೆಯನ್ನು ಚಾಮರಾಜನಗರ ವೈದ್ಯಕೀಯ ಮಹಾವಿದ್ಯಾಲಯದ ಡಾ. ಶಶಿಧರ್ ಉದ್ಘಾಟಿಸಿ ಮಾತನಾಡಿ ಒತ್ತಡ ರಹಿತವಾದ ಜೀವನ ವಿಧಾನವನ್ನು ಅರಿಯಬೇಕು. ಒತ್ತಡ ಮುಕ್ತವಾಗಲು ಭಗವಂತನ ಆರಾಧನೆ ಬಹಳ ಮುಖ್ಯ ಧ್ಯಾನದಿಂದ ಮನಸ್ಸನ್ನು ನಿರಾಳಗೊಳಿಸಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು, ಸಂಸ್ಕೃತಿ ಚಿಂತಕರವಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ನವರಾತ್ರಿ ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಇಡೀ ವಿಶ್ವದ ಎಲ್ಲೆಡೆ ವಾಸಿಸುವ ಭಾರತೀಯರು ನವರಾತ್ರಿಯನ್ನು ಸಂಭ್ರಮದಿಂದ ಭಕ್ತಿಯಿಂದ ಆರಾಧಿಸುತ್ತಾರೆ. ನವರಾತ್ರಿಯಲ್ಲಿ ಉಪವಾಸ, ಅಧ್ಯಯನ ,ಧ್ಯಾನ ಮಹತ್ವವಾದದ್ದು. ನವರಾತ್ರಿಯಲ್ಲಿ ಗೊಂಬೆ ಕೂರಿಸುವಪದ್ಧತಿ ವಿಶೇಷವಾಗಿದೆ. ಶಕ್ತಿ ರೂಪವನ್ನು ಪ್ರತಿಯೊಬ್ಬ ವ್ಯಕ್ತಿಯು ತಾಯಿಯ ರೂಪದಲ್ಲಿ ಪಡೆಯುತ್ತಾನೆ. ತಾಯಿಯನ್ನು ಪೂಜಿಸೋಣ. ಹೆಚ್ಚು ಮಾತನಾಡದೆ ಮೌನದಿಂದ ನವರಾತ್ರಿಯಲ್ಲಿ ಮತ್ತಷ್ಟು ಶಕ್ತಿಯನ್ನು ,ಚೈತನ್ಯವನ್ನು, ಸ್ಪೂರ್ತಿಯನ್ನು, ಜ್ಞಾನವನ್ನು, ಸ್ವೀಕರಿಸೋಣ.
ವಾತಾವರಣದಲ್ಲಿ ಇರುವ ಶ್ರೇಷ್ಠ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಹೆಚ್ಚು ಸಾರ್ಥಕ ಪಡಿಸಿಕೊಳ್ಳಬೇಕು. ನವರಾತ್ರಿ ಯಲ್ಲಿ ಮಕ್ಕಳಿಗೆ ವಿಶೇಷವಾಗಿ ನವಶಕ್ತಿಯ ರೂಪವನ್ನು ಧರಿಸಿ ತಮ್ಮ ಮಕ್ಕಳಲ್ಲಿ ನವದುರ್ಗಿಯರನ್ನು ಕಂಡು ಭಕ್ತಿಯಿಂದ ಪೂಜಿಸುವ ಪದ್ಧತಿ ಇದೆ . ಮಕ್ಕಳು ದೇವರ ಸಮಾನ. ಪ್ರತಿ ಮಾತೆಯಲ್ಲೂ ಪ್ರೀತಿ ,ವಿಶ್ವಾಸ, ನಂಬಿಕೆ, ಕರುಣೆ ,ಶಕ್ತಿ, ದಾನ ,ಧರ್ಮ, ಮಮತೆ ,ಧೈರ್ಯ ಸಾಹಸ, ಧರ್ಮ ರಕ್ಷಣೆಯ ಗುಣಗಳನ್ನು ಕಾಣಬಹುದು. ಭಾರತವು ಕೂಡ ತಾಯಿಯ ಸ್ವರೂಪವಾಗಿದೆ. ಭಾರತಾಂಬೆ ನಮ್ಮೆಲ್ಲರ ತಾಯಿಯಂತೆ ನವದುರ್ಗಿಯ ಸ್ವರೂಪದಲ್ಲಿರುವ ಭಾರತವು ಸದಾ ಸ್ವರ್ಗಕ್ಕೆ ಸಮಾನವಾಗಿದೆ ಎಂದರು.
ಶ್ರೀಮತಿ ಡಾ.ಅಶ್ವಿನಿ ಶಶಿಧರ್ ಮಾತನಾಡಿ ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಕಾಶಭವನದಲ್ಲಿ ನವದುರ್ಗಿಯ ಸ್ವರೂಪದ ಚೈತನ್ಯ ನಾರಿಶಕ್ತಿಯ ಕಾರ್ಯಕ್ರಮ ಬಹಳ ಸುಂದರವಾಗಿದೆ. ಮಕ್ಕಳಲ್ಲಿ ದೈವಿ ಪ್ರಜ್ಞೆಯನ್ನು ಹೆಚ್ಚಿಸೋಣ ಎಂದರು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ಆರಾಧ್ಯ, ಸತೀಶ್, ಪುಷ್ಪಗೀತ, ಶ್ರೀನಿವಾಸ್, ಪುಟ್ಟಶೇಖರ ಮೂರ್ತಿ, ಪ್ರಮೀಳಾಊದಗಟ್ಟಿ, ನಿರಂಜನ್, ಶ್ರೀನಿವಾಸಮೂರ್ತಿ, ಜಗದಂಬ, ಮಹೇಶ್, ಸುಂದರ್ ಇತರರು. ಇದ್ದರು.