Saturday, September 27, 2025
Google search engine

Homeಸ್ಥಳೀಯಮೈಸೂರಿನ ದಸರಾ ಸಂಭ್ರಮಕ್ಕೆ ಪಾರಂಪರಿಕ ಟಾಂಗಾ ಸವಾರಿ ಮೆರುಗು

ಮೈಸೂರಿನ ದಸರಾ ಸಂಭ್ರಮಕ್ಕೆ ಪಾರಂಪರಿಕ ಟಾಂಗಾ ಸವಾರಿ ಮೆರುಗು

ಮೈಸೂರು: ಮೈಸೂರಲ್ಲಿ  ದಸರಾ ಸಂಭ್ರಮ ಜೋರಾಗಿದೆ. ಇಂದು ಶನಿವಾರ ಟಾಂಗಾ ಸವಾರಿ ಕಾರ್ಯಕ್ರಮ ನಡೆದಿದೆ.ಬೆಳ್ಳಂಬೆಳ್ಳಿಗೆಯೇ ಇಪ್ಪತ್ತಕ್ಕೂ ಹೆಚ್ಚು ಟಾಂಗಾ ಗಾಡಿಗಳು ಸಾಂಪ್ರದಾಯಿಕ‌ ಉಡುಗೆ ತೊಟ್ಟ ನವ ವಧುವರರನ್ನ ಕೂರಿಸಿಕೊಂಡು ಸಂಚಾರ ಮಾಡಿವೆ.ಜೋಡಿಗಳನ್ನು ಕೂರಿಸಿಕೊಂಡು ಅರಸರ ಇತಿಹಾಸ ಸಾರುವ ಪಾರಂಪರಿಕ‌ ಕಟ್ಟಡಗಳ ಕುರಿತು ಮಾಹಿತಿ ನೀಡಲಾಗಿದೆ.

ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ರಂಗಚಾರ್ಲು ಪುರಭವನದಲ್ಲಿ ಪಾರಂಪರಿಕ‌ ಕಟ್ಟಡ ಮತ್ತು ಇತಿಹಾಸದ ಮಾಹಿತಿ ಪಾರಂಪರಿಕ‌ ಉಡುಗೆಗಳನ್ನು ಪ್ರಚಲಿತಗೊಳಿಸುವುದು ಹಾಗೂ ನಶಿಸಿ ಹೋಗುತ್ತಿರುವ ಪಾರಂಪರಿಕ ಟಾಂಗಾಗಳ ಉಳಿಸುವಿಕೆ ಉದ್ದೇಶದಿಂದ ಟಾಂಗಾ ಸವಾರಿ ಆಯೋಜಿಸಲಾಗಿತ್ತು.

ಇತ್ತೀಚಿನ ಕನ್ನಡ‌ದ ಪ್ರಸಿದ್ಧ ಸಿನಿಮಾವಾದ ಸು ಫ್ರಂ ಸೋ ಚಿತ್ರದ ನಟರು ಮತ್ತು ನಿರ್ದೇಶಕರಾದ ಪ್ರಕಾಶ್ ತುಮಿನಾಡು ದಂಪತಿಗಳು ಸಹ ಟಾಂಗಾ ಸವಾರಿ ಮಾಡುವುದರೊಂದಿಗೆ ಚಾಲನೆ ನೀಡಿದರು.

ಪಾರಂಪರಿಕ‌ ಉಡುಗೆಯೊಂದಿಗೆ ಟಾಂಗಾ ಸವಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ದಂಪತಿಗಳು ಆಗಮಿಸಿದ್ದು, ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸಿದರು. ಮೈಸೂರು ಪೇಟ, ಪಂಚೆ‌ ಮತ್ತು ಶಲ್ಯದೊಂದಿಗೆ ಪತಿ ಸಿದ್ಧವಾಗಿದ್ದರೆ ಇತ್ತ ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಪತ್ನಿ ತಯಾರಾಗಿದ್ದರು. ಉತ್ತರ ಕರ್ನಾಟಕ, ಕೊಡಗು, ಗೌಡರ ಶೈಲಿಯಲ್ಲಿಯೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಂಪತಿಗಳು ತಮ್ಮ ಪಾರಂಪರಿಕ ಶೈಲಿಯಲ್ಲಿ ತಯಾರಾಗುವ ಮೂಲಕ ಮತ್ತೊಮ್ಮೆ ಮದುವೆಗೆ ಸಿದ್ಧಗೊಂಡಿರುವಂತೆ ಸುಮಾರು 50 ಜೋಡಿಗಳು ಕಂಗೊಳಿಸುತ್ತಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಕಾಶ್ ತುಮಿನಾಡು ಅವರು, ಮೈಸೂರು ದಸರಾ ಮಹೋತ್ಸವವು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದು, ಇಂದಿನ ಕಾರ್ಯಕ್ರಮವು ನಾಡಿನ‌ ಆಚಾರ ಮತ್ತು ಸಾಂಸ್ಕೃತಿಕ ವಿಚಾರವನ್ನು ಸಾರುವುದರೊಂದಿಗೆ ನಮ್ಮ ಯುವ ಪೀಳಿಗೆಯನ್ನು ಸೆಳೆಯಲಿದೆ‌. ಪ್ರಸ್ತುತ ದೇವಸ್ಥಾನ ಅಥವಾ ಇನ್ನಾವುದೋ ಸಮಾರಂಭದಲ್ಲಿ ಮಾತ್ರ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಂಪ್ರದಾಯಿಕ ಉಡುಗೊರೆಯು ಮತ್ತಷ್ಟು ಪ್ರಚಲಿತಗೊಳ್ಳಬೇಕಿದೆ ಎಂದು ತಿಳಿಸುವ ಮೂಲಕ ಸು ಫ್ರಂ ಸೋ ಚಿತ್ರದ ಸಣ್ಣ ಡೈಲಾಗ್ ಹೊಡೆದರು‌.

ಟಾಂಗಾ ಸವಾರಿಯು ನಗರದ ಪ್ರಮುಖ ರಸ್ತೆಗಳಾದ ದೊಡ್ಡ ಗಡಿಯಾರ, ಅಂಬಾ ವಿಲಾಸ ಅರಮನೆ, ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ, ಜಗನ್ಮೋಹನ ಅರಮನೆ, ಮೈಸೂರು ನಗರ ಪಾಲಿಕೆ ದಾರಿ ಮೂಲಕ ಸಾಗಿ, ಮಹಾರಾಜ ಸಂಸ್ಕೃತ ಪಾಠಶಾಲೆ, ಕಾಡಾ‌ಕಛೇರಿ, ಗನ್ ಹೌಸ್ ವೃತ್ತದ ಮೂಲಕ ಹಾರ್ಡಿಂಜ್ ವೃತ್ತದಿಂದ ಪುರಭವನಕ್ಕೆ ತಲುಪಿತು.

ಉದ್ಘಾಟನಾ ಸಮಾರಂಭದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ‌ ಇಲಾಖೆ ಆಯುಕ್ತರಾದ ದೇವರಾಜು, ಇತಿಹಾಸ ತಜ್ಞರಾದ ಡಾ.ಎನ್.ಎಸ್.ರಂಗರಾಜು,‌ ಡಾ.ಸಲ್ವ ಪಿಳ್ಳೆ ಅಯ್ಯಂಗಾರ್, ಉಪ‌ ನಿರ್ದೇಶಕರಾದ ಡಾ.ಸಿ.ಎನ್. ಮಂಜುಳಾ, ತಾರಕೇಶ್, ಅಂಬರೀಶ್ ಸೇರಿದಂತೆ‌ ಇನ್ನಿತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular