ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಕಾರಣದಿಂದ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಪರಿಶೀಲನೆಗೆ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ಈ ವೇಳೆ ರಸ್ತೆ ಗುಂಡಿಗಳನ್ನು ಕಂಡಂತ ಸಿಎಂ ಸಿದ್ಧರಾಮಯ್ಯ ಅಧಿಕಾರಗಳ ವಿರುದ್ಧ ಕೆಂಡಾಮಂಡಲರಾದರು. ಈ ವೇಳೆ ಅಧಿಕಾರಿಗಳು ರಸ್ತೇಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಲ್ ಕ್ಲಾಸ್ ತೆಗೆದುಕೊಂಡರು.
ಮಾರ್ಗ ಮಧ್ಯದಲ್ಲಿ ರಿಂಗ್ ರಸ್ತೆಯ ಬದಿಯಲ್ಲಿ CC ಕ್ಯಾಮರಾ ಇಲ್ಲದಿರುವ ಜಾಗದಲ್ಲಿ ಹಳೆ ಕಟ್ಟಡ ತ್ಯಾಜ್ಯ ಸುರಿದಿರುವುದನ್ನು ಗಮನಿಸಿದ ಸಿಎಂ, ತಮ್ಮ ವಾಹನ ಚಾಲಕ ನವೀನ್ ಗೆ ಕಾರು ನಿಲ್ಲಿಸುವಂತೆ ಸೂಚಿಸಿದರು. ಕಾರಿನಿಂದ ಇಳಿದ ಸಿಎಂ ಈ ಜಾಗದಲ್ಲಿ ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಾಹನ ಸೀಜ್ ಮಾಡಿ ಕೇಸು ದಾಖಲಿಸುವಂತೆ ಸೂಚಿಸಿದರು.
ಬಳಿಕ, ಅಧಿಕಾರಿಗಳೇನು ರಸ್ತೆಯಲ್ಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ? ರಸ್ತೆಗೆ ತ್ಯಾಜ್ಯ ಸುರಿದಿರುವುದನ್ನು ಗಮನಿಸೋಕೆ ಆಗೋದಿಲ್ಲವಾ ಎಂದು ಬಿಬಿಎಂಪಿ, ಬಿಡಿಎ ಮತ್ತು ಟ್ರಾಫಿಕ್ ಪೊಲೀಸರನ್ನು ಖಾರವಾಗಿ ಪ್ರಶ್ನಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು.
ಮೆಟ್ರೋ ಕಾಮಗಾರಿ ಆಗುವಾಗ ಮೆಟ್ರೋದವರು ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ ಮಾಡಿರುವುದು, ರಸ್ತೆ ಬದಿ ನೀರು ನಿಲ್ಲುವಂತೆ ಮಾಡಿರುವುದು, ನೀರು ಸರಾಗವಾಗಿ ಹರಿಯಲು ಇರುವ ವ್ಯವಸ್ಥೆಯನ್ನೂ ಮುಚ್ಚಿಸಿರುವ ಬಗ್ಗೆ ಹಾಗೂ ವೈಟ್ ಟಾಪಿಂಗ್ ರಸ್ತೆ ಹಾಳು ಮಾಡಿರುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಎಲ್ಲವನ್ನೂ ಗಮನಿಸಿದ ಸಿಎಂ ತಕ್ಷಣ ದುರಸ್ತಿಗೆ ಹಾಗೂ ಸರ್ವೀಸ್ ರಸ್ತೆಗಳ ನಿರ್ವಹಣೆಗೆ ಸೂಚನೆ ನೀಡಿದರು.