ವರದಿ: ಸ್ಟೀಫನ್ ಜೇಮ್ಸ್
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಂಧ್ರ ಪ್ರದೇಶ ಮತ್ತು ಒರಿಸ್ಸಾ, ಕರಾವಳಿ ತೀರ ಮತ್ತು ಮಹಾರಾಷ್ಟ್ರದಲ್ಲಿ ವಾಯುಭಾರ ಕುಸಿತವಾಗುತ್ತಿದೆ. ಸರ್ಕ್ಯೂಲೇಶನ್ ಕೂಡ 5.8 ಕಿಲೋ ಮೀಟರ್ ಎತ್ತರದಲ್ಲಿದೆ. ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಉಜನಿ, ವೀರಾ ಜಲಾಶಯದಿಂದ, 2.90 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಹರಿಸಲಾಗುತ್ತಿದೆ. ಇದರ ಪರಿಣಾಮದಿಂದ ರಾಜ್ಯದ ಭೀಮಾ ನದಿ ತೀರದ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ, ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದು 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾತ್ರಿ ತಾಯಿ ಜೊತೆ ಸಹೋದರರು ಮಲಗಿದ್ರು. ಬೆಳಗ್ಗೆ ತಾಯಿ ಎದ್ದು ಕೊಠಡಿಯಿಂದ ಹೊರಗೆ ಬರುತ್ತಿದ್ದಂತೆ, ಗೋಡೆ ಕುಸಿದಿದೆ. ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಶ್ರೀಶೈಲ್ ಸ್ಥಿತಿ ಗಂಭೀರವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಆಲಮೇಲ ತಾಲೂಕಿನ ತಾವರಖೇಡ ಗ್ರಾಮದ ತೋಟದ ಮನೆಗಳಲ್ಲಿದ್ದ 8 ಜನರನ್ನು, ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 2 ಕಿರು ಸೇತುವೆಗಳು ಮುಳುಗಡೆ ಆಗಿವೆ. ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಗ್ರಾಮಸ್ಥರು ಪರದಾಡುವಂತಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ, 3.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಗೋಡಿಗಾಳ ಗ್ರಾಮದ ಒಂದರಲ್ಲೇ ಸುಮಾರು 200 ಎಕರೆ ಜಮೀನಲ್ಲಿ ನೀರು ತುಂಬಿಕೊಂಡಿದೆ.
ಕರಾವಳಿ ಹಾಗೂ ಉತ್ತರ ಒಳನಾಡು, ದಕ್ಷಿಣ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ 10 ಸೆಂಟಿ ಮೀಟರ್, ಬಾಗಲಕೋಟೆ-ಬೆಳಗಾವಿ ಜಿಲ್ಲೆಯಲ್ಲಿ 9 ಸೆಂಟಿ ಮೀಟರ್, ಮುದ್ದೆಬಿಹಾಳ-ಕಲಬುರಗಿ-ಯಾದಗಿರಿಯಲ್ಲಿ 8 ಸೆಂಟಿ ಮೀಟರ್, ಬೆಂಗಳೂರಿನಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.