Tuesday, September 30, 2025
Google search engine

Homeರಾಜ್ಯಸುದ್ದಿಜಾಲಪರೀಕ್ಷಾ ಶುಲ್ಕ ಕಡಿತ, ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಪರೀಕ್ಷಾ ಶುಲ್ಕ ಕಡಿತ, ಉಪನ್ಯಾಸಕರ ನೇಮಕಾತಿಗೆ ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಹುಣಸೂರು : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕು. ಪರೀಕ್ಷಾ ಶುಲ್ಕ ಪಾವತಿ ದಿನಾಂಕ ಮತ್ತು ಪರೀಕ್ಷೆಯನ್ನು ಮುಂದೂಡಬೇಕು. ಹೆಚ್ಚಳ ಮಾಡಿರುವ ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ( SFI ) ನೇತೃತ್ವದಲ್ಲಿ ನಗರದ ಡಿ ದೇವರಾಜ ಅರಸು ಕಾಲೇಜು ಬಳಿ ಮತ್ತು ಮಹಿಳಾ ಪ್ರಥಮ ದರ್ಜೆ ಕಾಲೇಜು ಮುಂದೆ ಪ್ರತ್ಯೇಕ ಪ್ರತಿಭಟನೆ ನಡೆಯಿತು.

ಕಾಲೇಜುಗಳ ಮುಂದೆ SFI ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕೂಡಲೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ಹೆಚ್ಚಿಸಿರುವ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು. ಉಪನ್ಯಾಸಕರನ್ನು ನೇಮಕಾತಿ ಮಾಡಬೇಕು ಮತ್ತು ಪರೀಕ್ಷಾ ಶುಲ್ಕ ಪಾವತಿ ದಿನಾಂಕ ಮತ್ತು ಪರೀಕ್ಷೆಯ ದಿನಾಂಕವನ್ನು ಮುಂದೂಡಬೇಕು. ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ SFI ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಟಿ. ಎಸ್. ಮಾತನಾಡಿ, ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗಿ 3 ತಿಂಗಳು ಕಳೆದಿದೆ. ರಾಜ್ಯದಲ್ಲಿರುವ ಬಹುತೇಕ ಸರ್ಕಾರಿ ಪದವಿ ಕಾಲೇಜುಗಳಲ್ಲಿ 70% ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಲೇಜುಗಳು ಪ್ರಾರಂಭವಾಗಿ 3 ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕಾತಿಯಾಗಿಲ್ಲ. ಇಲ್ಲಿಯ ತನಕ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಪಠ್ಯ ಕ್ರಮ ಮುಗಿದಿಲ್ಲ ಮತ್ತು ಹಲವು ಕಾಲೇಜುಗಳಲ್ಲಿ ಕೆಲವು ವಿಷಯಗಳಲ್ಲಿ ಪಾಠಗಳೇ ಪ್ರಾರಂಭವಾಗಿಲ್ಲ. ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಮೈಸೂರು ವಿವಿ ಸೆ. 24 ರಂದು ಅಧಿಸೂಚನೆಯನ್ನು ಹೊರಡಿಸಿ ಪರೀಕ್ಷಾ ಶುಲ್ಕವನ್ನು 02-10-2025 ರ ಒಳಗೆ ಪಾವತಿ ಮಾಡುವಂತೆ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಿದೆ. ಮುಖ್ಯ ಪರೀಕ್ಷೆಯನ್ನು ಅಕ್ಟೋಬರ್ ನಲ್ಲಿ ನಡೆಸುವುದಾಗಿ ತಿಳಿಸಿದೆ ಎಂದರು.

ಹುಣಸೂರು ತಾಲೂಕು ಅಧ್ಯಕ್ಷ ಜೀವನ್ ಕುಮಾರ್ ಮಾತನಾಡಿ, ಹಲವು ಕಾಲೇಜುಗಲ್ಲಿ ಪಾಠಗಳಾಗದೆ ಆಂತರಿಕ ಪರೀಕ್ಷೆಗಳನ್ನು ನಡೆಸಲು ಮುಂದಾಗುತ್ತಿವೆ. ಇದು ವಿದ್ಯಾರ್ಥಿಗಳ ಆರೋಗ್ಯ ಮೇಲೆ ಮತ್ತು ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೆಚ್ಚಾಗಿ ಸರ್ಕಾರಿ ಕಾಲೇಜುಗಳಲ್ಲಿ, ಬಡವ, ರೈತ, ಕಾರ್ಮಿಕ, ದಲಿತ, ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವರ್ಷ ಸುಮಾರು 400 ರೂ. ಪರೀಕ್ಷಾ ಶುಲ್ಕ ಹೆಚ್ಚಳ ಮಾಡಲಾಗಿದೆ. ಆದರಿಂದ ತಕ್ಷಣ ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕು ಮತ್ತು ಪರೀಕ್ಷಾ ಶುಲ್ಕ ದಿನಾಂಕ ಮತ್ತು ಮುಖ್ಯ ಪರೀಕ್ಷೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಿದರು. ಕೂಡಲೇ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು ತಪ್ಪಿದಲ್ಲಿ ವಿದ್ಯಾರ್ಥಿಗಳು ಮೈಸೂರು ಚಲೋ ಮಾಡುತ್ತೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಎಸ್ ಎಫ್ ಐ ತಾಲೂಕು ಕಾರ್ಯದರ್ಶಿ ಪ್ರಿಯಾ, ರಾಜ್ಯ ಸಮಿತಿ ಸದಸ್ಯರಾದ ಅಭಿ ಗೌಡ ಡಿ ಮತ್ತು ರಜಿಯಾ ಯಾಸ್ಮಿನ್ ಹಾಗೂ ವಿದ್ಯಾರ್ಥಿ ಮುಖಂಡ ರಾದ ದೀಕ್ಷಿತಾ, ಸಹನಾ, ಸಿಂಚನ, ಸ್ಫೂರ್ತಿ ನಿಶಿತಾ, ಮಂಜು ಮತ್ತು ಮೊಹಮ್ಮದ್ ಸಕ್ಲೇನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular