Tuesday, September 30, 2025
Google search engine

HomeUncategorizedರಾಷ್ಟ್ರೀಯಬಿಡದಿ ಟೌನ್‌ಶಿಪ್ ಯೋಜನೆಯ ಹಿಂದೆ ಭೂಮಿಘಾತ: ಡಿಕೆಶಿ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆರೋಪ

ಬಿಡದಿ ಟೌನ್‌ಶಿಪ್ ಯೋಜನೆಯ ಹಿಂದೆ ಭೂಮಿಘಾತ: ಡಿಕೆಶಿ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆರೋಪ

ನವದೆಹಲಿ: ಬಿಡದಿ ಟೌನ್‌ ಶಿಪ್‌ ಹೆಸರಿನಲ್ಲಿ ಏನೆಲ್ಲಾ ದಂಧೆ ನಡೆಯುತ್ತಿದೆ ಎನ್ನುವುದು ಗೊತ್ತಿದೆ. ಬಡರೈತರಿಂದ ಭೂಮಿ ಕಿತ್ತುಕೊಂಡು ಬೇಕು ಬೇಕಾದವರಿಗೆ ಹಂಚಿಕೊಳ್ಳಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ನವದೆಹಲಿಯಲ್ಲಿ ಸೋಮವಾರ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ಈಗಾಗಲೇ 2-3 ಸಾವಿರ ಎಕರೆ ಭೂಮಿ ಏನೇನ್ ಆಗಿದೆ ಅಂಥ ಗೊತ್ತು. ಕರ್ನಾಟಕದ ಸಂಪತ್ತು ಲೂಟಿ ಹೊಡೆಯುವುದನ್ನು ತಡೆಯಲು ಐದು ವರ್ಷ ಜನ ಅಧಿಕಾರ ಕೊಡಬೇಕು. ಆಗ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಇಲ್ಲವಾದರೆ ಈಗಿರುವ ವ್ಯವಸ್ಥೆಯಲ್ಲಿ ನಿಮ್ಮ ಕರ್ಮಗಳನ್ನು ತೊಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.

2006 ರಲ್ಲಿ ನಾನು ಐದು ಟೌನ್ ಶಿಪ್ ಮಾಡುವ ನಿರ್ಧಾರ ಮಾಡಿದ್ದು ನಿಜ. ಬಿಡದಿಯ ಬಳಿ ಟೌನ್ ಶಿಫ್ ಮಾಡುವುದು ನನ್ನ ಕಾರ್ಯಕ್ರಮವೇ ಆಗಿತ್ತು. ಡಿಕೆಶಿ ಅವರನ್ನೇ ಕೇಳಬಯಿಸುತ್ತೇನೆ. ಆ ಯೋಜನೆ ವಿರುದ್ಧ ಕಾಂಗ್ರೆಸ್ ನಾಯಕರೇ ಆಗಿದ್ದ ಹೆಚ್.ಡಿ. ಪಾಟೀಲ್‌, ಉಗ್ರಪ್ಪ ಅವರ ನೇತೃತ್ವದಲ್ಲಿ ರಚನೆ ಮಾಡಿದ್ದ ಸತ್ಯಶೋಧನಾ ಸಮಿತಿಯ ವರದಿಯನ್ನು ತೆರೆದು ನೋಡಿ ನೀವು. ಆ ವರದಿಯಲ್ಲಿ ಏನೇನು ಇದೆ ಎಂಬದನ್ನು ಜನರ ಮುಂದೆ ಇಡಿ. ನನ್ನ ಮೇಲೆ ಆರೋಪ ಮಾಡಿದ್ರಲ್ಲಾ, ಈಗ ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಕನಸಿನ ಯೋಜನೆಯನ್ನು ಜಾರಿಗೆ ತರುತ್ತಿದ್ದಾರಂತೆ! ಯಾರಿಗೋ ಒಬ್ಬರಿಗೆ ಐನೂರು ಎಕರೆ, ಇನ್ನೊಬ್ಬನಿಗೆ ಇನ್ನೂರು ಎಕರೆ, ಮತ್ತೊಬ್ಬನಿಗೆ ಮುನ್ನೂರು ಎಕರೆ.. ಹೀಗೆ ತಮಗೆ ಬೇಕಿದ್ದವರಿಗೆ ಹಂಚಿಕೊಂಡು ಹೋಗುತ್ತಿದ್ದಾರೆ. ಇದು ಜನರ ಜಮೀನು, ನಿಮ್ಮ ಸಂಪಾದನೆಯದ್ದಲ್ಲ ಎಂಬುದನ್ನು ಮರೆಯಬೇಡಿ. ನಿಮ್ಮ ಸರಕಾರ ಇನ್ನು ಎರಡು ವರ್ಷ ಇರುತ್ತೆ. ಆ ಎರಡು ವರ್ಷದಲ್ಲಿ ಈ ಯೋಜನೆಯನ್ನು ಮಾಡುತ್ತೀರಾ? ಎಂದು ಕೇಂದ್ರ ಸಚಿವರು ಡಿಕೆಶಿಯನ್ನು ಕೇಳಿದರು.

ಯೋಜನೆ ಮಾಡುವ ಮುನ್ನ ನಾನು ರೈತರ ಜತೆ ನಾಲ್ಕು ಸಭೆಗಳನ್ನು ಮಾಡಿದೆ. ಕೃಷ್ಣಾ ಕಚೇರಿಗೆ ಕರೆಸಿ ಸಭೆ ಮಾಡಿದೆ. ಮಹಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಭೆಗಳಿಗೆ ಬಂದಿದ್ದರು. ನಾನು ಒಂದು ಇಂಚು ಭೂಮಿಯನ್ನು ಸ್ವಾಧೀನ ಮಾಡಿರಲಿಲ್ಲ. ದಾಖಲೆಗಳು ಇವೆ, ತೆಗೆದು ನೋಡಲಿ ಎಂದು ತಿರುಗೇಟು ಕೊಟ್ಟರು.

ನಾನು 60,000 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದೆ. ಕೇಂದ್ರದ ಆರ್ಥಿಕ ವ್ಯವಹಾರಗಳ ಸಮಿತಿಯಿಂದಲೂ ಅನುಮೋದನೆ ಪಡೆದಿದ್ದೆ. ನನ್ನ ಸರಕಾರ ಹೋದ ಮೇಲೆ ಅದು ಅಲ್ಲಿಗೇ ನಿಂತು ಹೋಯಿತು. ಒಂದು ಇಂಚು ಭೂಮಿಯನ್ನು ನಾನು ಸ್ವಾಧೀನ ಮಾಡಿಕೊಳ್ಳಲಿಲ್ಲ ಎಂದು ಅವರು ಹೇಳಿದರು.

ಈ ವ್ಯಕ್ತಿ ಎದೆ ಮುಟ್ಟಿಕೊಂಡು ಹೇಳಲಿ, ಎಷ್ಡು ಜನರ ಮನೆ ಹಾಳು ಮಾಡಿದ್ದಾರೆ ಎಂದು. ಶಾಂತಿ ನಗರ ಹೌಸಿಂಗ್ ಸೊಸೈಟಿ ಪ್ರಕರಣವನ್ನೇ ನೋಡಿ, ದಲಿತರಿಗೆ ಮನೆ ಮಾಡಿಕೊಡಲು ಮಾಡಿದ್ದ ಸೊಸೈಟಿ ಅದು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲು 70-80 ಎಕರೆ ಜಮೀನು ಕೊಟ್ಟು ದಲಿತರಿಗೆ ಸೈಟು ಕೊಡಿ ಎಂದು ಹೇಳಿದ್ದರು. ಕೊನೆಗೆ ಅದನ್ನು ಏನು ಮಾಡಿದರು ಎನ್ನುವುದು ಗೊತ್ತಿದೆ. ನೈಜ ಸೊಸೈಟಿಗೆ ಘೋರಿ ತೋಡಿ ವಿಜಯಪುರದಿಂದ ಯಾವುದೋ ತರಕಾರಿ ಸೊಸೈಟಿ ತಂದು ನಕಲಿಯನ್ನು ಅಸಲಿ ಮಾಡಿಕೊಂಡಿದ್ದು ಗೊತ್ತಿದೆ. ಹಾಗೆಯೇ ಇನ್ನೊಂದು ಸೊಸೈಟಿಗೆ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಭೂಮಿ ಹೊಡೆದರು. ಎಲ್ಲದರ ಬಗ್ಗೆ ನನ್ನ ಬಳಿ ಎಲ್ಲಾ ದಾಖಲೆಗಳೂ ಇವೆ ಎಂದು ನೇರ ವಾಗ್ದಾಳಿ ನಡೆಸಿದರು.

ಬೆಂಗಳೂರಿನ 59 ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದು ನಾನು. ನಾನು ಪ್ರಚಾರ ತೆಗೆದುಕೊಳ್ಳಲಿಲ್ಲ. ಈಗ ಕುಣಿಗಲ್ ಅನ್ನು ಬೆಂಗಳೂರಿಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಬಿಟ್ಟರೇ ಮಂಗಳೂರನ್ನು ಬೆಂಗಳೂರಿಗೆ ಸೇರಿಸುತ್ತಾರೆ! ಕುಣಿಗಲ್‌ ನಲ್ಲಿ ಈತನ ಭಾವಮೈದನಿಗೆ ಅನುಕೂಲ ಮಾಡಲು ಅದನ್ನೂ ಮಾಡುತ್ತಿದ್ದಾರೆ ಎಂದು ಸಚಿವರು ಕುಟುಕಿದರು.

ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಈಗ ಸಮಾಜಘಾತುಕ ಶಕ್ತಿಗಳು, ಕಳ್ಳಕಾಕರು, ಭೂಗಳ್ಳರ ಕೈಗೆ ಸಿಕ್ಕಿ ನರಳುತ್ತಿದೆ. ಸಂಪದ್ಭರಿತ ನಗರವನ್ನು ಬರ್ಬಾದ್‌ ಮಾಡುವ ಕೆಲಸ ಆಗುತ್ತಿದೆ ಎಂದು ಅವರು ದೂರಿದರು.

RELATED ARTICLES
- Advertisment -
Google search engine

Most Popular