ಬೆಂಗಳೂರು: ಕಿರುತೆರೆಯ ʼಗಟ್ಟಿಮೇಳ’ ಧಾರಾವಾಹಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದೆ ಕಮಲಶ್ರೀ ಅವರು ಸ್ತನದ ಕ್ಯಾನ್ಸರ್‌ನಿಂದ ನಿಧನ ಹೊಂದಿದ್ದಾರೆ.
70 ವರ್ಷ ಮೇಲ್ಪಟ್ಟಿದ್ದ ಹಿರಿಯ ನಟಿ ಹಲವು ತಿಂಗಳುಗಳಿಂದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಅವರು ಧಾರವಾಹಿಗಳಲ್ಲಿ ನಟಿಸುವುದನ್ನು ಕೈಬಿಟ್ಟಿದ್ದರು. ಆದರೆ ಅದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ನಿನ್ನೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಮಲಶ್ರೀ ಅವರು ಕನ್ನಡದ ಹಲವಾರು ಕಿರುತೆರೆ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ಬಹುತೇಕ ಧಾರವಾಹಿಗಳಲ್ಲಿ ಅಜ್ಜಿ ಪಾತ್ರಗಳಲ್ಲೇ ಮಿಂಚಿದ್ದರು. ಅವರು ತಮ್ಮ ಅಭಿನಯದ ಮೂಲಕ ನಾಡಿನಾದ್ಯಂತ ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದರು. ಆದರೆ ಅವರ ನಿಧನ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಕಮಲಶ್ರೀ ಅವರಿಗೆ ಗಂಡ, ಮಕ್ಕಳು ಇಲ್ಲ. ಅನಾರೋಗ್ಯದ ಕಾರಣ ಅವರಿಗೆ ದುಡಿಯಲು ಸಾಧ್ಯವಾಗದೆ ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ಕಷ್ಟಪಟ್ಟಿದ್ದರು. ಅವರ ಅಂತ್ಯಕ್ರಿಯೆ ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆಯಲಿದೆ.
ಕಮಲಶ್ರೀ ಅವರು ಕಾವೇರಿ, ಕನ್ನಡ ಮೀಡಿಯಂ, ಗಟ್ಟಿಮೇಳ, ಪತ್ತೆದಾರಿ ಪ್ರತಿಭಾ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಡಾ ರಾಜ್‌ಕುಮಾರ್ ಬ್ಯಾನರ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ನಾಟಕದಲ್ಲಿಯೂ ಅಭಿನಯಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದ ಕಮಲಶ್ರೀ ಅವರು, ನನಗೆ ಕ್ಯಾನ್ಸರ್ ಆಗಿದೆ, ನನಗೆ ಸರ್ಜರಿ ಮಾಡೋದಕ್ಕೂ ಆಗಲ್ವಂತೆ, ವಯಸ್ಸಾಗಿದೆ, ಆಮೇಲೆ ಕಿಮೋಥೆರಪಿ ಕೊಟ್ಟರೆ ನಾನು ತಡ್ಕೊಳಲ್ವಂತೆ. ಅದಕ್ಕೆ ಸ್ವಲ್ಪ ದುಬಾರಿ ಮಾತ್ರೆಗಳೆಲ್ಲ ಬರೆದು ಕೊಡ್ತಾರೆ, ತಗೊಳ್ತಾ ಇದೀನಿ. ಆ ಮಾತ್ರೆಯಿಂದ ನನಗೆ ಸ್ವಲ್ಪ 60% ಪರವಾಗಿಲ್ಲ ಅಂತ ಡಾಕ್ಟರ್ ಹೇಳಿದ್ದಾರೆ. ಗಟ್ಟಿಮೇಳ ಧಾರಾವಾಹಿ ಕಲಾವಿದರು ನನಗೆ ತುಂಬ ಸಹಾಯ ಮಾಡಿದ್ದಾರೆ. ಗಿರಿಜಾ ಲೋಕೇಶ್, ಉಮಾಶ್ರೀ, ಗಟ್ಟಿಮೇಳ ಧಾರಾವಾಹಿ ಅಶ್ವಿನಿ ಹೀಗೆ ಸಾಕಷ್ಟು ಜನರು ಧನಸಹಾಯ ಮಾಡಿದ್ದಾರೆ. ಬೇರೆಯವರಿಗೆ ಕಷ್ಟ ಕೊಡೋಕೆ ನನಗೆ ಇಷ್ಟವಿಲ್ಲ. ಒಳ್ಳೆಯ ಧಾರಾವಾಹಿ ಅವಕಾಶ ಸಿಗುವಾಗಲೇ, ನನಗೆ ದೇವರು ಏನಾದರೊಂದು ಕಷ್ಟ ಕೊಡುತ್ತಾನೆ, ಅದೇ ಬೇಸರ ಎಂದು ಹೇಳಿದ್ದರು.