ಬೆಂಗಳೂರು: ಇಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ 71ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಉದ್ಘಾಟಿಸಿದ್ದಾರೆ.
ಈ ವೇಳೆ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು, ಬಂಡೀಪುರದಲ್ಲಿ 19 ಕೋತಿಗಳ ಸಾವು ಅತೀವ ನೋವು ತಂದಿದ್ದು, ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಆದರೂ ಇಂತಹ ಘಟನೆಗಳು ನಡೆಯುತ್ತಿರುವುದು ದುರ್ದೈವ. ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು, ವನ ಪ್ರದೇಶ ಕ್ಷೀಣಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅನಿವಾರ್ಯವಾಗಿದೆ. ವನ್ಯಜೀವಿಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಉದ್ದೇಶವಾಗಿದೆ ಎಂದರು.

ರಾಜ್ಯ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದಲೇ ನಮ್ಮ ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ 5395 ಆನೆಗಳಿದ್ದರೆ, 563 ಹುಲಿಗಳಿವೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷ ಪ್ರಾಶನದಿಂದ ಒಂದೇ ದಿನ 1% ರಷ್ಟು ಹುಲಿಗಳು ಸಾವಿಗೀಡಾದವು ಇದು ಹೃದಯ ವಿದ್ರಾವಕ ಘಟನೆ ಎಂದು ನೋವು ವ್ಯಕ್ತಪಡಿಸಿದರು.
ಇಂತಹ ಆಘಾತಕಾರಿ ಘಟನೆಗಳು ಮರುಕಳಿಸಬಾರದು. ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಸಿಬ್ಬಂದಿಯ ಜವಾಬ್ದಾರಿ ಮಾತ್ರ ಅಲ್ಲ. ನಾಗರಿಕರ ಕರ್ತವ್ಯವೂ ಆಗಿದೆ. ಇಂದು ಹಲವು ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಕೆಲವು ಅವಸಾನ ಕಂಡಿವೆ. ಹೀಗಾಗಿ ಜನರಲ್ಲಿ ಅರಣ್ಯದ ಬಗ್ಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದರು.
ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀ ಜಯಂತಿ. ಸತ್ಯ, ಶಾಂತಿ ಮತ್ತು ಅಹಿಂಸೆ ಎಂಬ ಶಸ್ತ್ರ ಹಿಡಿದು ಸತ್ಯಾಗ್ರಹದ ಶಕ್ತಿಯನ್ನು ಜಗತ್ತಿಗೆ ತೋರಿದ ಮತ್ತು ಭಾರತವನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸಿದ ಮಹಾತ್ಮಾ ಗಾಂಧೀ ಅವರು ಪ್ರಕೃತಿ, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮಹಾತ್ಮಾ ಗಾಂಧೀ ಅವರು, “ಪ್ರಕೃತಿ, ಪರಿಸರ ಇರುವುದು ಮನುಷ್ಯನ ಅವಶ್ಯಕತೆ ಪೂರೈಸುವುದಕ್ಕೇ ಹೊರತು, ದುರಾಸೆ ಪೂರೈಸುವುದಕ್ಕಲ್ಲ’’ ಎಂದು ಪ್ರತಿಪಾದಿಸುತ್ತಿದ್ದರು. ಈ ಜಗತ್ತು ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲ, ಬದಲಾಗಿ ನಮ್ಮ ಮುಂದಿನ ಪೀಳಿಗೆಯಿಂದ ನಾವು ಪಡಿದಿರುವ ಸಾಲ ಎಂದೂ ಮಹಾತ್ಮಾ ಗಾಂಧೀ ಹೇಳುತ್ತಿದ್ದರು ಎಂದು ಖಂಡ್ರೆ ಸ್ಮರಿಸಿದರು.
ಬೆಂಗಳೂರು ನಗರವೊಂದರಲ್ಲೇ ಸುಮಾರು 10 ಸಾವಿರ ಕೋಟಿ ರೂ. ಬೆಲೆ ಬಾಳುವ 250 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ಅಲ್ಲಿ ಸಸಿಗಳನ್ನು ನೆಡಲಾಗಿದೆ. ಬೆಂಗಳೂರು ನಗರದ ಹಸಿರು ಪ್ರದೇಶ ಹೆಚ್ಚಳ ಮಾಡಲಾಗುತ್ತಿದೆ. ಇದರ ಜೊತೆಗೆ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ಮಾದರಿಯಲ್ಲಿ ಬೃಹತ್ ಸಸ್ಯೋದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಹೆಸರುಘಟ್ಟ ಪ್ರದೇಶದಲ್ಲಿ 5678 ಎಕರೆ ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.