ಮೈಸೂರು: ದಸರಾ ಎಂದರೆ ನೆನಪಾಗುವುದು ಮೈಸೂರು ಅದರಲ್ಲೂ ವಿಶ್ವವಿಖ್ಯಾತ 416ನೇ ಜಂಬೂ ಸವಾರಿ ಆರಂಭವಾಗಿದ್ದು, ಇದೀಗ ಆರನೇ ಬಾರಿ ಅಂಬಾರಿ ಹೊತ್ತು ಅಭಿಮನ್ಯು ಅರಮನೆ ಬಲರಾಮ ಬಾಗಿಲಿನಿಂದ ಹೊರ ಬಂದಿದ್ದಾನೆ.
ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ಸಿಎಂ
ಅಭಿಮನ್ಯುವಿಗೆ ಎಡ ಹಾಗೂ ಬಲ ಭಾಗದಲ್ಲಿ ರೂಪ ಹಾಗೂ ಕಾವೇರಿ ಕುಮ್ಕಿ ಆನೆಗಳಾಗಿ ಸಾಥ್ ಕೊಟ್ಟಿದ್ದು, ಸಂಜೆ 4.42 ಗಂಟೆಯಿಂದ 5.16ರ ನಡುವೆ ಶುಭ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ,ಸೇರಿದಂತೆ ವಿವಿಧ ಗಣ್ಯರು ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗಿದ್ದು,ಅದರ ಜೊತೆಗೆ ಪಿರಂಗಿ ದಳವು 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿ ಜಂಬೂ ಸವಾರಿಯನ್ನ ಅಧಿಕೃತವಾಗಿ ಚಾಲನೆ ನೀಡಿದೆ.
ಇನ್ನು ಅರಮನೆಯಿಂದ ಬಲರಾಮ ದ್ವಾರದಿಂದ ಈ ಜಂಬೂ ಸವಾರಿ ಆರಂಭವಾಗಿದ್ದು, ಚಾಮರಾಜ ವೃತ್ತ, ಕೆ.ಆರ್. ಸರ್ಕಲ್, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಹೈವೇ ಸರ್ಕಲ್ ಮೂಲಕ ಬನ್ನಿಮಂಟಪಕ್ಕೆ ಈ ಜಂಬೂ ಸವಾರಿ ಸಾಗಲಿದೆ. ನಂತರ ಸಂಜೆ 7 ಗಂಟೆಗೆ ರಾಜ್ಯಪಾಲರು ಹಾಗೂ ಸಿಎಂ ಸಮ್ಮುಖದಲ್ಲಿ ಪಂಜಿನ ಕವಾಯತು ಸಹ ನಡೆಯಲಿದೆ.
750 ಕೆಜಿ ತೂಕದ ಅಂಬಾರಿ
59 ವರ್ಷದ ಅಭಿಮನ್ಯು 6ನೇ ಬಾರಿ 750 ಕೆಜಿ ತೂಕದ ಅಂಬಾರಿಯನ್ನ ಹೊರುತ್ತಿದ್ದು, ಧನಂಜಯ ನಿಶಾನೆ ಆನೆಯಾಗಿ ಹಾಗೂ ಗೋಪಿ ನೌಫತ್ ಆನೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಸುಮಾರು 5 ಕಿಮೀ ಈ ಜಂಬೂ ಸವಾರಿ ನಡೆಯಲಿದ್ದು, ಮೈಸೂರಿನಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಅಪರೂಪದ ಕೋಟ್ಯಂತರ ಜನರು ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿದ್ದು, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನ ಸಹ ಮಾಡಲಾಗಿದೆ.
ಹಾಗೆಯೇ, ಜಂಬೂ ಸವಾರಿ ವೀಕ್ಷಣೆ ಮಾಡುವ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಬರುವವರಿಗೆ ಮೈಸೂರು ಜಿಲ್ಲಾಡಳಿತದ ವತಿಯಿಂದ ಸುಮಾರು 45 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಜಂಬೂ ಸವಾರಿ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಡ್ರೋನ್ ಮೂಲಕ ಸಹ ಕಣ್ಗಾವಲು ಇಡಲಾಗಿದೆ. ಈ ಜಂಬೂ ಸವಾರಿ ಸಮಯದಲ್ಲಿ ಮೈಸೂರು ನಗರದಲ್ಲಿ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಸುಮಾರು 6,384 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.