ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮಗಳ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವುದರ ಜತೆಗೆ ವೈಜ್ಞಾನಿಕ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣ ಕಸ ಎಂದು ವಿಂಗಡಿಸಿ ಸಹಕರಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ವಿನಂತಿಸಿದರು.
ಬೆಳಗಾವಿ ತಾಲೂಕಿನ ಉಚ್ಚಗಾಂವ ಗ್ರಾಮದಲ್ಲಿ ಗುರುವಾರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮವನ್ನು ಸ್ವಚ್ಛವಾಗಿಡುವ ಹಾಗೂ ಪರಿಸರ ಸಂರಕ್ಷಿಸುವ ಮಹತ್ವದ ಉದ್ದೇಶವಾಗಿದೆ.ಈ ಉಪಕರಣಗಳು ಪ್ಲಾಸ್ಟಿಕ್ ಸೇರಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ಸಮುದಾಯದ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿವೆ. ಜತೆಗೆ ಗ್ರಾಪಂಗಳಿಗೆ ಆದಾಯ ವೃದ್ಧಿಯಾಗಲಿದೆ ಎಂದರು.
ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಈ ಘಟಕಗಳ ಸದ್ಬಳಕೆ ಆಗುವ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಕಾರ್ಯನಿರ್ವಹಿಸಬೇಕು. ಈ ಘಟಕಗಳಿಂದ ಗ್ರಾಪಂ ಆದಾಯ ವೃದ್ಧಿಯಾಗುವುದರ ಜತೆಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಭವಿಷ್ಯದ ದಿನಗಳಲ್ಲಿ ಈ ಘಟಕಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಜತೆಗೆ ಪ್ಲಾಸ್ಟಿಕ್ ಮುಕ್ತ ಗ್ರಾಮಗಳ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಬೆಳಗಾವಿ ತಾಲೂಕಿನ ಉಚ್ಚಗಾಂವ, ಬೈಲಹೊಂಗಲ ತಾಲೂಕಿನ ಕೆಂಗಾನೂರು, ಯರಗಟ್ಟಿ ತಾಲೂಕಿನ ಆಲದಕಟ್ಟಿ ಕೆ.ಎಂ., ಖಾನಾಪುರ ತಾಲೂಕಿನ ನಂದಗಡ ಹಾಗೂ ರಾಮದುರ್ಗ ತಾಲೂಕಿನ ಕೆ.ಚಂದರಗಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ತಲಾ 16ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಘಟಕಗಳು ಏಕಕಾಲದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಯುವರಾಜ ಕದಂ, ಇಒ ಪುದೀಪ ಸಾವಂತ, ಸಹಾಯಕ ನಿರ್ದೇಶಕ ಬಸವಂತ ಕಡೆಮನಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಇತರರಿದ್ದರು.