ವರದಿ: ಸ್ಟೀಫನ್ ಜೇಮ್ಸ್
ಮೈಸೂರಿನಲ್ಲಿ ದಸರಾ ಮಹೋತ್ಸವದ ಭಾಗವಾಗಿ ನಡೆದ ಬೃಹತ್ ದಸರಾ ಜಂಬೂ ಸವಾರಿ ಹಾಗೂ ತೆರೆದ ವಾಹನದ ಪರೇಡ್ ಭವ್ಯವಾಗಿ ನಡೆದಿದೆ. ಈ ತೆರೆದ ವಾಹನದ ಪರೇಡ್ ನಲ್ಲಿ ಸಂಭವಿಸಿದ ಘಟನೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಸಭಾ ಕಾರ್ಯಕ್ರಮವಾಗಿರುವ ಈ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಭಾಗವಹಿಸಿರುವುದು ಕಾಂಗ್ರೆಸ್ ಹೈಕಮಾಂಡ್ ಕೋಪಕ್ಕೆ ಕಾರಣವಾಗಿದೆ.
ಪರೇಡ್ ವೇಳೆ ತೆರೆದ ಜೀಪ್‌ನಲ್ಲಿ ಸಚಿವ ಮಹದೇವಪ್ಪ ಅವರ ಮೊಮ್ಮಗ ಎನ್ನಲಾದ ಬಾಲಕನೊಬ್ಬ ಪ್ರಮುಖ ನಾಯಕರೊಂದಿಗೆ ತೆರಳುತ್ತಿರುವುದು ಜನರ ಹಾಗೂ ಮಾಧ್ಯಮಗಳ ಗಮನ ಸೆಳೆಯಿತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಚರ್ಚೆಗಳು ನಡೆಯುತ್ತಿದ್ದು, ಪಕ್ಷದ ಶಿಸ್ತಿಗೆ ಧಕ್ಕೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಹೈಕಮಾಂಡ್ ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರಿ ಹಾಗೂ ಪ್ರೋಟೋಕಾಲ್‌ಗೆ ಒಳಪಟ್ಟ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಏಕೆ ಪಾಲ್ಗೊಂಡರು? ಎಂಬ ಪ್ರಶ್ನೆ ಮುಂದಿಟ್ಟಿದೆ. ಇದರ ಬಗ್ಗೆ ತಕ್ಷಣದ ವರದಿ ನೀಡುವಂತೆ ರಾಜ್ಯದ ನಾಯಕರಿಗೆ ಸೂಚನೆ ನೀಡಲಾಗಿದೆ.
ದಸರಾ ಮಹೋತ್ಸವದಲ್ಲಿ ನಡೆದ ಈ ಘಟನೆಯು ಈಗ ಮೈಸೂರು, ಬೆಂಗಳೂರು ಮಾತ್ರವಲ್ಲದೆ ದೆಹಲಿ ಮಟ್ಟದ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರುಗಳು ಈಗ ಹೈಕಮಾಂಡ್‌ಗೆ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ರಾಜಕೀಯ ಬೆಳವಣಿಗೆ ಸಾಧ್ಯವಿದೆ.