Saturday, October 4, 2025
Google search engine

Homeರಾಜ್ಯಚೆಕ್‌ ಹಾಕಿದ್ರೆ 1 ಗಂಟೆಯಲ್ಲೇ ಹಣ!

ಚೆಕ್‌ ಹಾಕಿದ್ರೆ 1 ಗಂಟೆಯಲ್ಲೇ ಹಣ!

ವರದಿ: ಸ್ಟೀಫನ್ ಜೇಮ್ಸ್

ಚೆಕ್‌ ಕ್ಲಿಯರೆನ್ಸ್‌ಗಳಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸಲು, ಇಂದಿನಿಂದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ತರಲಾಗಿದೆ. ಈ ಬದಲಾವಣೆ 2 ಹಂತದಲ್ಲಿ ಜಾರಿಗೆ ಬರಲಿದೆ. ಮೊದಲ ಹಂತ ಇಂದಿನಿಂದಲೇ ಜಾರಿಗೆ ಬರಲಿದ್ದು, ಸಂಜೆ 7 ಗಂಟೆಯೊಳಗೆ ಚೆಕ್‌ಗೆ ಸಂಬಂಧಪಟ್ಟ ಬ್ಯಾಂಕ್‌ಗಳು ಕ್ಲಿಯರ್‌ ಮಾಡಬೇಕು. ತಪ್ಪಿದ್ದಲ್ಲಿ ಆ ಚೆಕ್‌ಗಳು ಸ್ವಯಂ ಆಗಿ ಸ್ವೀಕೃತವಾಗಿ ಹಣ ಪಾವತಿ ಆಗಲಿದೆ. 2ನೇ ಹಂತ 2026ರ ಜನವರಿ 3ರಿಂದ ಜಾರಿಗೆ ಬರಲಿದೆ. 3 ಗಂಟೆಯೊಳಗೆ ಚೆಕ್‌ಗಳನ್ನು ಸಂಬಂಧಿಸಿದ ಬ್ಯಾಂಕ್‌ಗಳು ಸ್ವೀಕೃತ ಅಥವಾ ತಿರಸ್ಕೃತ ಎಂದು ಖಚಿತಪಡಿಸಬೇಕಿದೆ.

ಬ್ಯಾಂಕಿಂಗ್‌ ನೆಟ್‌ವರ್ಕ್‌ಗಳು ಸಿಟಿಎಸ್‌ ಡಿಜಿಟಲ್‌ ವ್ಯವಸ್ಥೆ ಮೂಲಕ, ಸಂಬಂಧಪಟ್ಟ ಬ್ಯಾಂಕ್‌ಗೆ ಚೆಕ್‌ಗಳನ್ನು ಸ್ಕ್ಯಾನ್‌ ಮಾಡಿ ಕಳುಹಿಸಿಕೊಡುತ್ತವೆ. ಬೆಳಗ್ಗಿನ ಬ್ಯಾಚ್‌, ಮಧ್ಯಾಹ್ನದ ಬ್ಯಾಚ್‌, ಸಂಜೆ ಬ್ಯಾಚ್‌ ಹೀಗೆ ಹಂತ ಹಂತವಾಗಿ ಚೆಕ್‌ಗಳನ್ನು, ಗ್ರಾಹಕರು ಯಾವ ಬ್ಯಾಂಕಿನ ಚೆಕ್‌ ನೀಡಿದ್ದಾರೋ ಆ ಬ್ಯಾಂಕಿಗೆ ಕಳುಹಿಸಿಕೊಡಲಾಗುತ್ತದೆ. ಇದರಿಂದ ಚೆಕ್‌ಗಳ ಕ್ಲಿಯರಿಂಗ್‌ ಪ್ರಕ್ರಿಯೆ ವಿಳಂಬವಾಗುತ್ತಿತ್ತು.

ಇದಕ್ಕೆ ಪರಿಹಾರವಾಗಿ ಆರ್‌ಬಿಐ ಇದೀಗ ಚೆಕ್‌ ಟ್ರಂಕೇಷನ್‌ ಸಿಸ್ಟಂ ಅನ್ನು, ನಿರಂತರ ಕ್ಲಿಯರಿಂಗ್‌ ವ್ಯವಸ್ಥೆಯಾಗಿ ರೂಪಾಂತರಗೊಳಿಸಿದೆ. ಇದರಡಿ ಬ್ಯಾಂಕ್‌ಗಳಿಗೆ ಚೆಕ್‌ ನೀಡಿದ ತಕ್ಷಣ, ಅವುಗಳನ್ನು ಕ್ಲಿಯರೆನ್ಸ್‌ಗಾಗಿ ಕಳುಹಿಸಲಾಗುತ್ತದೆ. ಈ ಕಾರ್ಯ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಿರಂತರವಾಗಿ ನಡೆಯುತ್ತದೆ. ಪ್ರತಿ ಒಂದು ಗಂಟೆಗೊಮ್ಮೆ ಚೆಕ್‌ಗಳಿಗೆ ಸಂಬಂಧಿಸಿದ ಹಣದ ಸೆಟಲ್‌ಮೆಂಟ್‌ ಆಗುತ್ತದೆ. ಕೆಲವೇ ಗಂಟೆಗಳಲ್ಲಿ ಚೆಕ್‌ ಕ್ಲಿಯರ್‌ ಆಗಲಿದ್ದು, ಕೆಲವೇ ಗಂಟೆಗಳಲ್ಲಿ ಹಣ ಪಾವತಿಯಾಗುತ್ತದೆ.

ಈ ಹೊಸ ವ್ಯವಸ್ಥೆ ಜಾರಿಯಾದ ಬಳಿಕ ಚೆಕ್‌ ನೀಡುವವರು, ತಮ್ಮ ಖಾತೆಯಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು. ತಪ್ಪಿದರೆ ಚೆಕ್‌ ಬೌನ್ಸ್ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆಯನ್ನೂ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿದೆ.

RELATED ARTICLES
- Advertisment -
Google search engine

Most Popular