ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಬಿಜೆಪಿಯವರು ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಅವರೇನು ಕಾಂಗ್ರೆಸ್ ಹೈಕಮಾಂಡಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಶನಿವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ನಾನೇ ಐದು ವರ್ಷದ ಸಿಎಂ ಎಂದು ನೀಡಿರುವ ಹೇಳಿಕೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಯಾಕೆ ನಮ್ಮ ಪಕ್ಷದ ಬಗ್ಗೆ ಕಾಳಜಿ. ಅವರ ಪಕ್ಷದ ಕೆಲಸ ಮಾಡುವುದನ್ನು ಬಿಟ್ಟು ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಅವರು ಯಾರು ? ಅವರು ನಮ್ಮ ಹೈಕಮಾಂಡಾ ಎಂದು ಕಿಡಿಕಾರಿದರು.
ಕೇಂದ್ರ ಸರಕಾರದ ಎನ್ ಡಿಆರ್ ಎಫ್ ಹಣವನ್ನು ನಮ್ಮ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿಲ್ಲ. ಗ್ಯಾರಂಟಿ ಯೋಜನೆಗೆ ಬಿಜೆಪಿಯವರಿಗೆ ಕಾಮಾಲೆ ರೋಗ ಇದ್ದ ಹಾಗೆ ಆಗಿದೆ. ಗ್ಯಾರಂಟಿ ಯೋಜನೆ ಕರ್ನಾಟಕದಲ್ಲಿ ಯಶಸ್ವಿಯಾಗಿಬಿಟ್ಟಿಲ್ಲ. ಅದಕ್ಕೆ ತಳಮಳ ಮಾಡಿಕೊಂಡಿದ್ದಾರೆ ಎಂದರು. ಬಿಹಾರ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣದಲ್ಲಿ ನಮ್ಮ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಕಾಫಿ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಗ್ಯಾರಂಟಿ ಯೋಜನೆ ಅನುಷ್ಠಾನವಾಗುವುದಿಲ್ಲ ಎಂದಿದ್ದರು. ಈಗ ಅವರೇ ನಮ್ಮ ಗ್ಯಾರಂಟಿ ಯೋಜನೆ ಕಾಫಿ ಮಾಡಿದ್ದಾರೆ ಎಂದು ಚಾಟಿ ಬಿಸಿದರು.
ಬೆಳಗಾವಿಗೆ ಸೂಪರ್ ಶ್ಪೇಷಾಲಿಟಿ ಆಸ್ಪತ್ರೆ ನಾನೇ ಮಂಜೂರು ಮಾಡಿದ್ದೆ. ಮುಂದೆ ಅಧಿಕಾರಕ್ಕೆ ಬಂದ ಬಿಜೆಪಿಯವರು ಏನೂ ಮಾಡಲಿಲ್ಲ ಎಂದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಸೂಪರ್ ಶ್ಪೇಷಾಲಿಟಿ ಆಸ್ಪತ್ರೆಯನ್ನು ಯಾರಿಗೂ ಖಾಸಗಿ ಆಸ್ಪತ್ರೆಯವರಿಗೆ ನಿರ್ವಹಣೆ ಕೊಟ್ಟಿಲ್ಲ. ನಮ್ಮ ವೈದ್ಯರು ಯಾರು ಕೆಲಸ ನಿರ್ವಹಿಸುತ್ತಿಲ್ಲವೋ ಅಲ್ಲಿಯವರೆಗೂ ಖಾಸಗಿ ಆಸ್ಪತ್ರೆಯವರೆ ವೈದ್ಯರು ಸೇವೆ ಸಲ್ಲಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ರಾಮಲಿಂಗಾ ರೆಡ್ಡಿ,ಶಾಸಕ ಆಸೀಫ್ ಸೇಠ್, ರಾಜು ಕಾಗೆ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.