ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂತ್ಯವಾಗಿದೆ. ರಾಜ್ಯದ ಲಕ್ಷಾಂತರ ಜನರು ನಾಡಹಬ್ಬ ಮೈಸೂರು ದಸರಾಗೆ ಸಾಕ್ಷಿಯಾಗಿದ್ದಾರೆ. ಇದೀಗ ದಸರಾ ಸಂದರ್ಭ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ಹೊರಬಿದ್ದಿದೆ. ದಸರಾ ವೇಳೆ 6 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿ ಚಾಮುಂಡಿಯ ದರ್ಶನ ಪಡೆದಿದ್ದಾರೆ.
ವಿಜಯ ದಶಮಿಯಂದ ಜಂಬೂಸವಾರಿ ನಡೆಯುವ ಮೂಲಕ ದಸರಾ ಮಹೋತ್ಸವ ಸಂಪನ್ನವಾಗಿದ್ದರೂ ಕೂಡಾ ಮೈಸೂರಿಗೆ ಆಗಮಿಸುವ ಜನರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಭಕ್ತರ ದಂಡು ಮೈಸೂರಿಗೆ ಭೇಟಿ ನೀಡುತ್ತಲೇ ಇದೆ. ಇದೀಗ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಭಕ್ತರ ಅಂದಾಜು ಸಂಖ್ಯೆ 6 ಲಕ್ಷ ಎಂದು ಎಣಿಸಲಾಗಿದೆ.
ಇನ್ನು ವಿಜಯ ದಶಮಿಯಂದು 75 ಸಾವಿರ ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಅದೇ ರೀತಿ ನಂಜನಗೂಡಿಗೆ ದಸರಾ ಸಂದರ್ಭದಲ್ಲಿ ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀಕಂಠೇಶ್ವರಸ್ವಾಮಿ ದರ್ಶನ ಪಡೆದಿದ್ದಾರೆ.
ಚಾಮರಾಜೇಂದ್ರ ಮೃಗಾಲಯಕ್ಕೆ ಅಕ್ಟೋಬರ್ 1ರ ಆಯುಧಪೂಜೆಯಂದು 27,033 ಹಾಗೂ ವಿಜಯದಶಮಿಯಂದು 27,272 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ 2 ದಿನ 67 ಲಕ್ಷ ರೂ. ಆದಾಯ ಹರಿದು ಬಂದಿದೆ. ಒಟ್ಟಾರೆ 10 ದಿನದ ಮೈಸೂರು ಝೂಗೆ 1.56 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಜತೆಗೆ 1.91 ಕೋಟಿ ರೂ. ಆದಾಯ ಬಂದಿದೆ ಎನ್ನಲಾಗಿದೆ.
ಈ ಬಾರಿ ಜಂಬೂ ಸವಾರಿ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಅರಮನೆ ಮುಂಭಾಗ ಕೇವಲ 45 ಸಾವರ ಸೀಟುಗಳನ್ನ ಹಾಕಿ, ಸುಮಾರು 11 ಸಾವಿರ ಆಸನಗಳನ್ನು ಕಡಿಮೆ ಮಾಡಲಾಗಿತ್ತು. ಅಲ್ಲದೇ, ಸುತ್ತ-ಮುತ್ತಲಿನ ಕಟ್ಟಡ ಹಾಗೂ ಮರಗಳ ಮೇಲಿನಿಂದ ಜಂಬೂ ಸವಾರಿ ನೋಡುವುದಕ್ಕೆ ಸಹ ತಡೆ ಒಡ್ಡಲಾಗಿತ್ತು. ಸುಮಾರು 5 ಕಿಮೀ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ಅಭಿಮನ್ಯು ಬನ್ನಿ ಮಂಟಪಕ್ಕೆ ಹೋಗಿದ್ದು, ಅಲ್ಲಿಗೆ ಈ ವರ್ಷದ ದಸರಾ ಸಂಪನ್ನವಾಗಿದೆ.
ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಎಂದರೆ ಅದು ಅಂಬಾರಿ ಹೊರುವ ಅಭಿಮನ್ಯು ಅಂಡ್ ಟೀಮ್. ಅದರ ಜೊತೆಗೆ ಇನ್ನೊಂದು ಮೆರಗು ನೀಡುವ ವಿಚಾರ ಎಂದರೆ ಅದು ಸ್ಥಬ್ದಚಿತ್ರಗಳ ಮೆರವಣಿಗೆ. ಈ ವರ್ಷ ಸಹ ಎಲ್ಲಾ ಜಿಲ್ಲೆಗಳಿಂದ ವಿವಿಧ ರೀತಿಯ ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಸುಮಾರು 58 ಟ್ಯಾಬ್ಲೋಗಳು ಮೆರವಣಿಯಲ್ಲಿ ಸಾಗಿದ್ದು, ನೋಡುಗರಿಗೆ ಮನರಂಜನೆ ನೀಡಿದೆ.
31 ಜಿಲ್ಲೆಗಳ ಸಾಹಿತ್ಯ, ಸಂಸ್ಕೃತಿ ಹಾಗೂ ಕೆಲ, ವೈಶಿಷ್ಠ್ಯವನ್ನ ಜೊತೆಗೆ ಆಚಾರ ವಿಚಾರ ಮತ್ತು ಭೌಗೋಳಿಯ ವಿಚಾರಗಳನ್ನ ಸಾರುವ ಸ್ಥಬ್ದಚಿತ್ರಗಳು ಮೆರವಣಿಗೆ ಹೋಗಿದ್ದು, ಅದರ ಜೊತೆಗೆ 27 ರಾಜ್ಯ ಹಾಗೂ ಕೇಂದ್ರದ ಇಲಾಖೆವಾರು ಟ್ಯಾಬ್ಲೋಗಳು ಮತ್ತು ನಿಗಮ ಮಂಡಳಿ ಹಾಗೂ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಬಗ್ಗೆ ಟ್ಯಾಬ್ಲೋ ಮೆರವಣಿಗೆಯಲ್ಲಿ ಸಾಗಿದೆ.