ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಛಾಯಾಗ್ರಹಣವನ್ನು ಕೇವಲ ವೃತ್ತಿಯಾಗಿಯೇ ಅಲ್ಲ, ಜೀವನದ ಉಸಿರಾಗಿ ಸ್ವೀಕರಿಸಿದ ಬೆಳಗಾವಿಯ ಛಾಯಾಗ್ರಾಹಕ ದಂಪತಿ ತಮ್ಮ ಆಸೆಯನ್ನೇ ಮನೆ ರೂಪದಲ್ಲಿ ಸಾಕಾರಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿಯ ರವಿ ಹೊಂಗಲ ಎಂಬ ಛಾಯಾಗ್ರಾಹಕ ತನ್ನ ಕನಸಿನ ಮನೆ ಅನ್ನು ಕ್ಯಾಮರಾ ಆಕಾರದಲ್ಲಿ ನಿರ್ಮಿಸಿ, ಫೋಟೋಗ್ರಫಿ ಪ್ರೇಮಿಗಳಿಗೆ ಸ್ಪೂರ್ತಿಯಾದ್ದಾರೆ.
ಅಂದಾಜು ₹71 ಲಕ್ಷ ವೆಚ್ಚದಲ್ಲಿ ನಿರ್ಮಿತವಾದ ಈ ಮೂರು ಮಹಡಿಗಳ ಅಪರೂಪದ ಮನೆಗೆ ‘ಕ್ಲಿಕ್’ (Click) ಎಂದು ನಾಮಕರಣ ಮಾಡಲಾಗಿದೆ. ಈ ಮನೆಯನ್ನು ಗಮನ ಸೆಳೆಯುವಂತೆ ಮಾಡಿರುವುದು ಇದರ ವಿನ್ಯಾಸ: ಮನೆಯ ಕಿಟಕಿಗಳು ಲೆನ್ಸ್‌ನಂತೆ, ಬಾಗಿಲುಗಳು ಮೆಮೋರಿ ಕಾರ್ಡ್, ಫ್ಲಾಶ್ ಮತ್ತು ಇತರ ವೈಶಿಷ್ಟ್ಯಗಳ ಪ್ರತಿರೂಪವಾಗಿವೆ.
ಇದು ಸಾಮಾನ್ಯ ಮನೆಗಳೊಳಗಿನೊಂದು ಅಲ್ಲ: ಇದು ಛಾಯಾ ಗ್ರಹಣದ ಗೃಹಮಂದಿರ:
ರವಿ ಅವರ ಪತ್ನಿ ಕೂಡಾ ಛಾಯಾಗ್ರಾಹಕಿಯಾಗಿದ್ದು, ಈ ಕನಸು ನನಸಾಗಿಸಲು ಸತತ ಹತ್ತು ವರ್ಷಗಳ ಪರಿಶ್ರಮ ತೊಡಗಿದ್ದರು. ತಮ್ಮ ವೃತ್ತಿಗೆ ಇರುವ ಪ್ರೀತಿ ಮತ್ತು ಬದ್ಧತೆಯ ಪ್ರತೀಕವಾಗಿ ಈ ಗೃಹ ನಿರ್ಮಾಣವಾಗಿದೆ. ವಿಶೇಷವೆಂದರೆ, ಈ ದಂಪತಿ ತಮ್ಮ ಮೂರು ಗಂಡು ಮಕ್ಕಳಿಗೂ ಕೆನಾನ್, ನಿಕಾನ್ ಮತ್ತು ಎಫ್ಸಾನ್! ಕ್ಯಾಮರಾ ಬ್ರ್ಯಾಂಡ್‌ಗಳ ಹೆಸರು ಇಟ್ಟಿದ್ದಾರೆ.
ಇವರ ಮನೆಯ ಒಳಾಂಗಣವೂ ಛಾಯಾಗ್ರಹಣ ಸಂಸ್ಕೃತಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಬುತ್ತಿಯಂತಿರುವ ಹೊರ ನೋಟ, ಛಾಯಾಗ್ರಾಹಣದ ಸಾಧನಗಳ ಪ್ರತಿರೂಪವಾದ ಕಿತ್ತಳೆ ಬಣ್ಣದ ಬಾಗಿಲು, ಗೋಡೆ ಮೇಲೆ ಕ್ಯಾಮರಾ ಹಾಗೂ ಪ್ರಕೃತಿ ಛಾಯಚಿತ್ರಗಳು ಈ ಎಲ್ಲವೂ ಫೋಟೋಗ್ರಫಿ ಪ್ರೀತಿಗೆ ಜೀವಂತ ಸಾಕ್ಷಿ.
ರವಿ ಹೊಂಗಲ, ಬೆಳಗಾವಿಯ ಸುಂದರ ದೃಶ್ಯಗಳನ್ನು ಕ್ಲಿಕ್ಕಿಸಿ ಹಲವಾರು ಬಾರಿ ಪ್ರಶಂಸೆ ಗಳಿಸಿರುವ ಛಾಯಾಗ್ರಾಹಕರಾಗಿದ್ದು, ಈಗ ತಮ್ಮ ‘ಕ್ಲಿಕ್ ಹೌಸ್’ ಮೂಲಕ ಹೊಸತನ್ನು ಕಲ್ಪಿಸಬಹುದು ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಅವರ ಈ ಮನೆಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಭಾರತದೆಲ್ಲೆಡೆ ಈ ಕ್ರಿಯೇಟಿವ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಛಾಯಾಗ್ರಹಣವನ್ನೇ ಬದುಕಿನ ಅಸ್ತಿತ್ವವಾಗಿ ಮಾಡಿಕೊಂಡು, ಆ ಪ್ರೀತಿಯನ್ನೇ ಮನೆ ರೂಪದಲ್ಲಿ ಕಟ್ಟಿಕೊಂಡಿರುವ ಈ ಕುಟುಂಬ, ನಿಜಕ್ಕೂ ವಿಭಿನ್ನ – ಶತಮಾನದಲ್ಲಿ ಒಮ್ಮೆ ನಡೆಯಬಹುದಾದ ಅಪರೂಪದ ‘ಕ್ಯಾಮರಾ ಕುಟುಂಬ’.