Saturday, October 11, 2025
Google search engine

Homeರಾಜ್ಯಸುದ್ದಿಜಾಲಹಾಸನಂಬೆ ದೇವಿ ದರ್ಶನ ಇಂದಿನಿಂದ 13 ದಿನ ಭಕ್ತರಿಗೆ ಅವಕಾಶ : ನಿಯಮಗಳ ಪಾಲನೆ ಕಡ್ಡಾಯ

ಹಾಸನಂಬೆ ದೇವಿ ದರ್ಶನ ಇಂದಿನಿಂದ 13 ದಿನ ಭಕ್ತರಿಗೆ ಅವಕಾಶ : ನಿಯಮಗಳ ಪಾಲನೆ ಕಡ್ಡಾಯ

ಹಾಸನ : ಪ್ರಸಿದ್ಧ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ನಿನ್ನೆ ತೆರೆದಿದ್ದು, ದೇವಾಲಯಕ್ಕೆ ಅರ್ಚಕರ ತಂಡ ಪೂಜಾ ಸಾಮಗ್ರಿಗಳನ್ನು ತಂದಿದ್ದು, ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಸಮೇತ ಆಗಮಿಸಿ ಅರ್ಚಕರು, ಪ್ರಧಾನ ಅರ್ಚಕ ನಾಗರಾಜ ನೇತ್ರತ್ವದಲ್ಲಿ ದೇಗುಲದ ಬಾಗಿಲು ತೆರೆಯಲಾಯಿತು.

ಅರ್ಚಕರಿಂದ ಪೂಜೆ ನೆರವೇರಿಸಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ, ಸಂಸದರಾದ ಶ್ರೇಯಸ್ ಎಂ ಪಟೇಲ್, ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿoಗೇಗೌಡ, ಶಾಸಕರಾದ ಸ್ವರೂಪ್ ಪ್ರಕಾಶ್ ಅವರ ಸಮ್ಮುಖದಲ್ಲಿ ಬಾಗಿಲು ತೆರೆಯಲಾಯಿತು. ಅಕ್ಟೊಬರ್ 23 ವರೆಗೆ ಹಾಸನಾಂಬೆ ದೇವಿ ಜಾತ್ರೆ ನಡೆಯಲಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಾತನಾಡಿ ಹಾಸನಾಂಬ ಜಾತ್ರಾ ಮಹೋತ್ಸವದಿಂದ ನಾಡಿಗೆ ಶುಭವಾಗುತ್ತದೆ. ನಾಳೆ 6 ಗಂಟೆಯಿoದ 7 ಗಂಟೆಯವರೆಗೂ ಸಾರ್ವಜನಿಕರಿಗೆ ದರ್ಶನವಿರುತ್ತದೆ. ಆದರೆ ನಾಳೆ ಸರದಿ ಸಾಲು ಆರು ಗಂಟೆಗೆ ಮೊದಲೇ ಆರಂಭವಾಗುತ್ತದೆ. ಮತ್ತು ಸಂಜೆ 4 ಗಂಟೆಗೆ ಸರತಿ ಸಾಲಿಗೆ ನಿಲ್ಲುವುದನ್ನು ಬಂದ್ ಮಾಡಿ ಏಳು ಗಂಟೆಯವರೆಗೂ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕಾರಣ ಅದರ ನಂತರ ದೇವಾಲಯದ ಶಾಸ್ತ್ರಗಳಿಗೆ ಅನುವು ಮಾಡಿಕೊಡಬೇಕಾಗಿ ಎಂದು ತಿಳಿಸಿದರು.

11ನೇ ತಾರೀಖು ಬೆ.06 ಗಂಟೆಗೆ ಆರಂಭವಾದರೆ 22ನೇ ತಾರೀಖು ಸಂಜೆ 07 ಗಂಟೆಯವರೆಗೆ ದರ್ಶನ ಮುಂದುವರೆಯುತ್ತದೆ. ಆದರೆ ನೈವೇದ್ಯ ಮತ್ತು ಅಲಂಕಾರ, ಪೂಜಾ ಕೈಂಕರ್ಯಕ್ಕೆ ಆ ಸಮಯವನ್ನು ಮೀಸಲಿಡ ಬೇಕಾಗಿರುವುದರಿಂದ, ಪ್ರತಿದಿನ ಮುಂಜಾನೆ 02 ರಿಂದ 05 ವರೆಗೆ ಮತ್ತು ಮಧ್ಯಾಹ್ನ 02 ರಿಂದ 03.30 ಗಂಟೆವರೆಗೆ ದೇವಾಲಯ ತೆರೆದಿದ್ದರೂ ಈ ಸಮಯದಲ್ಲಿ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದರು.

23 ನೇ ತಾರೀಖು ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಇಂದು ಶಾಸ್ತ್ರೋಕ್ತವಾಗಿ, ವಿಧಿವತ್ತಾಗಿ ಬಾಗಿಲು ತೆರೆದಿರುವ ರೀತಿಯಲ್ಲೇ ಅಂದು ಅದೇ ರೀತಿಯಾಗಿ ಹಾಸನಾಂಬ ದೇವಿಯ ಬಾಗಿಲನ್ನು ಮುಂದಿನ ವರ್ಷದವರೆಗೆ ಮುಚ್ಚಲಾಗುತ್ತದೆ ಎಂದು ತಿಳಿಸಿದರು.

ನಾಡಿನ ಜನತೆ ದರ್ಶನವನ್ನು ಪಡೆದು ಹೋಗುವಾಗ ಅವರ ಅನುಭವ ಇನ್ನಷ್ಟು ವಿಶೇಷವಾಗಿರಲಿ ಎಂದು ಇಂದಿನಿoದ ಸಂಜೆ 06 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಈ ಜಾತ್ರಾ ಮಹೋತ್ಸವಕ್ಕೆ ಚಾಲನೆಯನ್ನು ಕೊಡುತ್ತಿದ್ದೇವೆ. ಇಂದು ಸಂಜೆ 6.30 ರಿಂದ ರಾತ್ರಿ 10.30 ವರೆಗೂ ಹೇಮಾವತಿ ಪ್ರತಿಮೆಯ ಆವರಣದಲ್ಲಿ ಜಾನಪದ, ಸಂಗೀತ, ಸಾಹಿತ್ಯ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಮತ್ತು ಹಾಸನಾಂಬ ದೇವಿಯ ಮತ್ತೊಂದು ರೂಪ ಚಾಮುಂಡಿಗೆ ನವರಸ ರೂಪಗಳ ಪ್ರದರ್ಶನದೊಂದಿಗೆ ಇಂದು ಆರಂಭವಾಗುತ್ತದೆ ಎಂದರು.

ಪ್ರತಿನಿತ್ಯ ಭಜನಾ ಕಾರ್ಯ ಕ್ರಮ, ಜಾನಪದ, ಸಂಗೀತ, ನೃತ್ಯ ಕಾರ್ಯಕ್ರಮಗಳು ಹಾಗೂ ಶಾಸ್ತ್ರೀಯ ಸಂಗೀತ ಹೀಗೆ ಬರುವ 12 ದಿನಗಳು ನಿರಂತರವಾಗಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಾಸನ ನಗರಾದ್ಯಂತ ಹಮ್ಮಿಕೊಳ್ಳಲಾಗಿದೆ. ಅದರ ಜೊತೆಗೆ ಈ ವರ್ಷ ಬರುವ ಸಾರ್ವಜನಿಕರಿಗೆ ಹೆಲಿ ಟೂರಿಸಂ ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು.

ದೇವಿಯ ದರ್ಶನಕ್ಕೆ ಬರುವಂತಹ ಜನರಿಗೆ ದರ್ಶನದ ಜೊತೆಗೆ ಹಾಸನದ ನೆನಪು ಶಾಶ್ವತವಾಗಿ ಉಳಿಯುವಂತಹ ಅನುಭವವನ್ನು ಸವಿದು ಹೋಗುವಂತೆ ಪ್ರತಿ ವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ಎಲ್ಲವನ್ನು ಆಯೋಜಿಸಲಾ ಗಿದೆ. ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ದೇವಿಯ ದರ್ಶನಕ್ಕೆ ಶ್ರೀಸಾಮಾನ್ಯರಿಗೆ ಮೊದಲ ಆಧ್ಯತೆ ಸಿಗಬೇಕು ಎಂದು ಜಿಲ್ಲಾಡಳಿತ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಈ ವರ್ಷ ಒಗ್ಗಟ್ಟಿನಿಂದ ತೀರ್ಮಾನ ಮಾಡಿದ್ದೇವೆ. ಕಾರಣ 20 ರಿಂದ 25 ಲಕ್ಷ ಜನ ಶ್ರೀಸಾಮಾನ್ಯರು ಬರುವಾಗ ಅವರಿಗೆ ಸುಗಮವಾಗಿ ದರ್ಶನ ಆಗಬೇಕು. ನಾಲ್ಕು ಜನ ಮುಖ್ಯಸ್ಥರಿಗೆ ಅನುಕೂಲ ಮಾಡುವುದಕ್ಕಾಗಿ. ಸಾವಿರಾರು ಜನ ಭಕ್ತಾಧಿಗಳು ನೂರಾರು ಕಿಲೋ ಮೀಟರ್ ದೂರದಿಂದ ಬಡವರು ಬಂದಿರುತ್ತಾರೆ ಅವರಿಗೆ ನಾವು ಸುಲಲಿತವಾಗಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.

ಶ್ರೀಸಾಮಾನ್ಯ ಭಕ್ತಾಧಿಗಳಿಗೆ ಹೆಚ್ಚಿನ ಆಧ್ಯತೆ ಕೊಡುವ ಉದ್ದೇಶದಿಂದ ಅತಿ ಗಣ್ಯರು ಭೇಟಿಗೆ ಬರುವವರಿಗೆ ಸಮಯವನ್ನು 10.30 ರಿಂದ 12.30 ವರೆಗೆ ನಿಗಧಿ ಮಾಡಲಾಗಿದೆ. ಅವರನ್ನು ನಗರದ ಪ್ರವಾಸಿ ಮಂದಿರದಿAದ ಜಿಲ್ಲಾಡಳಿತ ವಾಹನದಲ್ಲಿ ಕರೆದುಕೊಂಡು ಬಂದು ನೇರವಾಗಿ ದರ್ಶನವನ್ನು ಮಾಡಿಸಿ ಎಲ್ಲಾ ಗೌರವಗಳೊಂದಿಗೆ ವಿಶೇಷ ದರ್ಶನ ಮಾಡಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ ಇದಕ್ಕೆ ಅವರೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ ಎಂದರು.

ನನ್ನ ಕ್ಷೇತ್ರದ ಜನರಿಗೆ ದರ್ಶನಕ್ಕಾಗಿ 5 ಲಕ್ಷ ರೂಗಳನ್ನು ನೀಡಿ ಪಾಸ್‌ಗಳನ್ನು ಖರೀದಿಸಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರ ಹಿತವನ್ನು ಮರೆಯಬಾರದು ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಬೇರೆ ಬೇರೆ ಕಡೆ ನಡೆದಿರುವ ಘಟನೆಗಳ ಮನಸಿನಲ್ಲಿಟ್ಟು ಕೊಂಡು ನಮ್ಮ ಹಾಸನಾಂಬ ಉತ್ಸವ ಅತ್ಯಂತ ಸುಗಮವಾಗಿ ಆಗಬೇಕು. ಬಂದವರು ಖುಷಿಯಾಗಿ ಹೋಗಬೇಕು. ಒಂದೂ ಅಹಿತಕರ ಘಟನೆಗಳು ಆಗಬಾರದು ಎಂದು ಕೆಲವು ಬದಲಾವಣೆಗಳನ್ನು ತಂದಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬಯಸುತ್ತೇವೆ. ನಾಡಿನಾದ್ಯಂತ ಬರುವ ಎಲ್ಲಾ ಜನತೆಗೆ ಸ್ವಾಗತ ಮಾಡಲಿಕ್ಕೆ ಇಡೀ ಜಿಲ್ಲೆಯೇ ಅತ್ಯಂತ ಕಾತುರರಾಗಿದ್ದೇವೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಏನಾದರೂ ನಮ್ಮ ಕಡೆಯಿಂದ ನ್ಯೂನ್ಯತೆಗಳಿದ್ದರೆ ಅದನ್ನು ಕ್ಷಮಿಸಿ ಸುಖವಾಗಿ ದರ್ಶನವನ್ನು ಪಡೆದುಕೊಂಡು ಹೋಗಬೇಕು. ಈ ಜಾತ್ರಾಮಹೋತ್ಸವ ತುಂಬಾ ಯಶಸ್ವಿಯಾಗಿ ಆಗಲೆಂದು ಶುಭ ಹಾರೈಸಿದರು.

ಭಕ್ತರ ದರ್ಶನಕ್ಕೆ ವಸ್ತ್ರ ಸಂಹಿತೆ ಜಾರಿ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58ರಡಿಯಲ್ಲಿ ದೇವಸ್ಥಾನದ ರೂಢಿ, ಸಂಪ್ರದಾಯ ಮತ್ತು ಆಚರಣೆಯಂತೆ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ವಸ್ತ್ರ ಸಂಹಿತೆಯನ್ನು ಪಾಲಿಸುವುದು ಸೂಕ್ತವಾಗಿದ್ದು, ಈ ಬಗ್ಗೆ ದಿನಾಂಕ:19.09.2025 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ನಿರ್ಣಯವಾಗಿರುತ್ತದೆ.

ಆದ್ದರಿಂದ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58 ರಂತೆ ಹಾಸನ ಜಿಲ್ಲೆ ಹಾಸನ ಟೌನ್ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಪುರುಷರು ಪಂಚೆ, ದೋತಿಯಂತಹ ಅಥವಾ ಪೈಜಾಮದಂತಹ ಹಾಗೂ ಮಹಿಳೆಯರು ಸೀರೆ ಮತ್ತು ಚೂಡಿದಾರದಂತಹ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸುವುದು. ಯಾವುದೇ ರೀತಿಯ ಕರ್ತವ್ಯ ನಿರತ ಸಿಬ್ಬಂದಿಗಳು ಸಮವಸ್ತ್ರ, ಸಹಿತವಾಗಿ ಗರ್ಭಗುಡಿ ಪ್ರವೇಶಿಸಲು ಅವಕಾಶವಿರುವುದಿಲ್ಲ.

ಜನದಟ್ಟಣೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಉದ್ದೇಶದಿಂದ ಶಿಷ್ಟಾಚಾರ ದರ್ಶನದ ಸಮಯದಲ್ಲಿ ಮಾತ್ರ ಈ ಹಿಂದಿನoತೆ ಶಿಷ್ಟಾಚಾರದಂತೆ ಗರ್ಭಗುಡಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು, ಉಳಿದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಅಥವಾ ದೇವಾಲಯದ ಆಡಳಿತಾಧಿಕಾರಿಯವರು ಲಿಖಿತ ಅನುಮತಿ ನೀಡಿದಲ್ಲಿ ಮಾತ್ರ ಗರ್ಭಗುಡಿಗೆ ಪ್ರವೇಶಿಸಲು ನಿಯಮಾನುಸಾರ ಅವಕಾಶ ನೀಡಲು ಸೂಚಿಸಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸದಲ್ಲಿ ನಿಯೋಜಿತಗೊಂಡ ಕರ್ತವ್ಯ ನಿರತ ಸಿಬ್ಬಂದಿಗಳು ಮಾನ್ಯ ಆಯುಕ್ತರ ಆದೇಶದಂತೆ ಕ್ರಮವಹಿಸಲು ಸೂಚಿಸಿದ್ದು ಹಾಗೂ ಇಲಾಖಾ ಮುಖ್ಯಸ್ಥರು ನಿಯೋಜಿತ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಲತಾ ಕುಮಾರಿ ಅವರು ಆದೇಶಿಸಿದ್ದಾರೆ.

RELATED ARTICLES
- Advertisment -
Google search engine

Most Popular