ಬೀದರ್ : ‘ಸ್ವತಂತ್ರ ಪೂರ್ವದಿಂದಲೂ ವೀರಶೈವ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಎಂಬ ಕೂಗಿತ್ತು. ಈ ವಿಚಾರದಲ್ಲಿ ಕೆಲವರು ಅಪಪ್ರಚಾರ ಮಾಡಿ ವೈರತ್ವ ಮತ್ತು ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ. ಆದರೆ, ಶ್ರೀಗಳು ಮುಂದೆ ನಿಂತು ನಿರ್ಣಯ ತೆಗೆದುಕೊಳ್ಳುತ್ತಿಲ್ಲ’ ಎಂದು ಮಠಾಧೀಶರ ವಿರುದ್ಧ ಅರಣ್ಯ ಸಚಿವ ಈಶ್ವರ ಖಂಡ್ರೆ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
ಬಸವಕಲ್ಯಾಣದಲ್ಲಿ ಮಾತೆ ಗಂಗಾದೇವಿ ನೇತೃತ್ವದಲ್ಲಿ ನಡೆಯುತ್ತಿರುವ ಕಲ್ಯಾಣ ಪರ್ವ ವೇದಿಕೆಯಲ್ಲಿ ಮಾತಾಡಿದ ಈಶ್ವರ್ ಖಂಡ್ರೆ, ‘ಸ್ವತಂತ್ರ ಪೂರ್ವದಿಂದಲೂ ವೀರಶೈವ ಲಿಂಗಾಯತ ಧರ್ಮವನ್ನು ಪ್ರತ್ಯೇಕ ಎಂಬ ಕೂಗಿತ್ತು. ಈ ವಿಚಾರದಲ್ಲಿ ಕೆಲವರು ಅಪಪ್ರಚಾರ ಮಾಡಿ ವೈರತ್ವ ಮತ್ತು ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ. ಈಶ್ವರ್ ಖಂಡ್ರೆ ಬಾಯಲ್ಲಿ ಯಾವತ್ತಿಗೂ ಅಸತ್ಯ ಮಾತು ಬರಲ್ಲ ತಿಳ್ಕೊಳ್ಳಿ’ ಎಂದು ಖಂಡ್ರೆ ಹೇಳಿದರು.
‘ಸಮಾಜವನ್ನು ಸ್ವಾರ್ಥಕ್ಕಾಗಿ ಯಾವತ್ತಿಗೂ ನಾವು ಹಾಗೂ ನಮ್ಮ ತಂದೆಯವರೂ ಬಳಸಿಕೊಳ್ಳಲಿಲ್ಲ. ಸಮಾಜಕ್ಕಾಗಿ ನಮ್ಮ ಮೇಲೆ ಪ್ರಹಾರ ಆಗಿದೆ. ಆದರೆ ಸಮಾಜವನ್ನು ಬಳಸಿಕೊಂಡಿಲ್ಲ’ ಎಂದು ಹೇಳಿದರು. ‘ಎಲ್ಲಾ ಪೂಜ್ಯರು ದೊಡ್ಡ ದೊಡ್ಡ ಮಾತು ಹೇಳ್ತೀರಿ, ಉಪದೇಶ ಮಾಡ್ತೀರಿ, ಆಶೀರ್ವಚನ ನೀಡ್ತೀರಿ. ನೀವು ಒಂದು ಕಡೆ ಸೇರಿ ಎಲ್ಲರಿಗೂ ಆಹ್ವಾನ ನೀಡಿ ಒಂದು ವೇದಿಕೆ ಸಿದ್ಧಪಡಿಸಿ. ಎಲ್ಲರೂ ಒಗ್ಗಟ್ಟಾಗಿ ಒಂದೇ ಮನಸ್ಸಿನಿಂದ ಲಿಂಗಾಯತ ಧರ್ಮ ಪ್ರತ್ಯೇಕ ಎಂಬ ಪ್ರಸ್ತಾವನೆ ಕಳುಹಿಸಿ’ ಎಂದರು.
‘ಲಿಂಗಾಯತ ಧರ್ಮವನ್ನು ಯಶಸ್ವಿ ಮಾಡಬೇಕೆಂದರೆ ಒಬ್ಬರಿಗೊಬ್ಬರು ಕಾಲು ಎಳೆಯಬಾರದು. ಆರೋಪ, ಪ್ರತ್ಯಾರೋಪ ಮಾಡಿದ್ರೆ, ಹೋರಾಟ ಯಶಸ್ವಿಯಾಗುತ್ತಾ?’ ಎಂದು ಈಶ್ವರ್ ಖಂಡ್ರೆ ಪ್ರಶ್ನೆ ಮಾಡಿದರು.
‘ನೀವೆಲ್ಲರೂ ಪೂಜ್ಯರು ಸ್ವಾಮೀಜಿಗಳು ಒಂದು ಕಡೆ ಸೇರಿ ನಿರ್ಣಯ ಮಾಡಿ. ನೀವು ಏನು ನಿರ್ಣಯ ಮಾಡುತ್ತೀರಿ ಅದಕ್ಕೆ ನಾವು ಬದ್ಧರಾಗ್ತೀವಿ’ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಪ್ರತ್ಯೇಕ ಧರ್ಮದ ಚರ್ಚೆ ಜೋರಾಗಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದ್ರೆ, ಕಾರಣ ನೀಡದೇ ಕೇಂದ್ರ ಸರ್ಕಾರ ಪ್ರಸ್ತಾವನೆ ವಾಪಸ್ ಕಳಿಸಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಮುಂದೆ ಪ್ರತ್ಯೇಕ ಧರ್ಮದ ಬೇಡಿಕೆ ಇಡಲಾಗಿದೆ. ಮತ್ತೊಮ್ಮೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಲಾಗುತ್ತಿದೆ. ಅತ್ತ ಲಿಂಗಾಯತರ ಬಹುತೇಕ ಬೇಡಿಕೆಗಳಿಗೆ ಸಿದ್ದು ಅಸ್ತು ಎಂದಿದ್ದಾರೆ. ವಚನ ವಿವಿ ತೆರೆಯುವ ಬಗ್ಗೆ ಭರವಸೆ ಕೊಟ್ಟಿದ್ದಾರೆ.. ಬಸವ ಮೆಟ್ರೋ ಬಗ್ಗೆಯೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸ್ತಾರೆ. ಆದರೆ, ಪ್ರತ್ಯೇಕ ಧರ್ಮದ ಶಿಫಾರಸು ಬಗ್ಗೆ ಮಾತಾಡಿಲ್ಲ. ಅದರ ಬದಲಿಗೆ ಜನರ ನಿರ್ಧಾರವೇ ನನ್ನ ನಿರ್ಧಾರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾವಿಂದು ಹಿಂದೂ ಧರ್ಮವನ್ನು ರಕ್ಷಿಸಬೇಕಿದೆ. ಧರ್ಮ ಒಡೆಯುವ ದುಸ್ಸಾಹಸವನ್ನೂ ಗಮನಿಸಬೇಕಿದೆ. ಇದರ ಮಧ್ಯೆ ಸಮಾಜ ಒಗ್ಗೂಡಿಸುವ ಕೆಲಸ ಆಗಬೇಕಾಗಿದೆ ಎಂದು ಬಿಜೆಪಿ ಹೇಳ್ತಿದೆ.