ಕಾಗವಾಡ ಕ್ಷೇತ್ರದ ಅವಿರೋಧ ಆಯ್ಕೆ – ಶಾಸಕ ಬಾಲಚಂದ್ರ ಜಾರಕಿಹೊಳಿ
ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಜಾರಕಿಹೊಳಿ ಬಣದ ರಾಜಕೀಯ ಕೌಶಲ್ಯ ಮತ್ತೊಮ್ಮೆ ಬೆಳಗಿದೆ. ಜಿಲ್ಲೆಯ ಪಿಡಬ್ಲ್ಯೂಡಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಿಂದ ಕಾಗವಾಡ ಕ್ಷೇತ್ರದಲ್ಲಿ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಆಯ್ಕೆಯಲ್ಲಿ ಶಾಸಕ ಭರಮಗೌಡ (ರಾಜು) ಕಾಗೆ ಅವರಿಗೆ ಅದೃಷ್ಟ ಒಲಿದಿದೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, “ಕಾಗವಾಡ ಕ್ಷೇತ್ರದಿಂದ ಶಾಸಕ ರಾಜು ಕಾಗೆ ಹಾಗೂ ಶ್ರೀನಿವಾಸ ಪಾಟೀಲ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಾಜು ಕಾಗೆ, ಶ್ರೀಮಂತ ಪಾಟೀಲ ಹಾಗೂ ಶ್ರೀನಿವಾಸ ಪಾಟೀಲರೊಂದಿಗೆ ನಡೆದ ಸಮಾಲೋಚನೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಮಧ್ಯಸ್ಥಿಕೆ ವಹಿಸಿ, ಶ್ರೀನಿವಾಸ ಪಾಟೀಲ ಅವರಿಗೆ ನಾಮಪತ್ರ ಹಿಂದಕ್ಕೆ ಪಡೆಯಲು ಸಲಹೆ ನೀಡಿದರು . ಹೀಗಾಗಿ ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ” ಎಂದು ಹೇಳಿದರು.
ಬಾಲಚಂದ್ರ ಜಾರಕಿಹೊಳಿ ಮುಂದುವರೆದು, “ರಾಜು ಕಾಗೆ ಅವರು ಅನುಭವಸಂಪನ್ನ ಹಿರಿಯ ರಾಜಕಾರಣಿ. ಆ ಭಾಗದ ಶಾಸಕರಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಸತೀಶ್ ಜಾರಕಿಹೊಳಿ ಮಾರ್ಗದರ್ಶನ ನೀಡಿದರು. ಶ್ರೀನಿವಾಸ ಪಾಟೀಲ ಅವರಿಗೂ ಮುಂದೆ ಸಾಕಷ್ಟು ಅವಕಾಶಗಳಿವೆ,” ಎಂದರು. ಕಾಗವಾಡ ತಾಲೂಕಿನಲ್ಲಿ ಎಲ್ಲರೂ ಸೇರಿ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು. “ಈಗಾಗಲೇ ನಮ್ಮ ಪೆನಲ್‌ನಿಂದ 7 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಜನರ ಆಶೀರ್ವಾದ ಮತ್ತು ದೇವರ ಕೃಪೆಯಿಂದ ಡಿಸಿಸಿ ಬ್ಯಾಂಕ್ ಅಧಿಕಾರದ ಚುಕ್ಕಾಣಿ ನಮ್ಮ ಪೆನಲ್ ಹಿಡಿಯಲಿದೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದರು.