ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಆರೋಪಿಯಾಗಿ ಜೈಲಿನಲ್ಲಿರುವ ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಹಾಗೂ ಚಿನ್ನಯ್ಯನ ಸಹೋದರಿ ರತ್ನಾ ಸೋಮವಾರ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ.
ಚಿನ್ನಯ್ಯನಿಗೆ ಸಂಬಂಧಿಸಿದ ಕೆಲ ಮಾಹಿತಿಗಳನ್ನು ಕಲೆ ಹಾಕಲು, ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹಾಗೂ ಇತರ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಎಸ್.ಐ.ಟಿ ಅಧಿಕಾರಿಗಳು ಅವರಿಬ್ಬನ್ನು ಕರೆಸಿದ್ದಾರೆ ಎನ್ನಲಾಗಿದೆ.
ಚಿನ್ನಯ್ಯನು ಮಹೇಶ್ ಶೆಟ್ಟಿ ತಿಮರೋಡಿಯವರ ಮನೆಗೆ ತೆರಳಿದ ವೇಳೆ ಆತನೊಂದಿಗೆ ಪತ್ನಿಯೂ ಇದ್ದಳು ಎಂದು ಸೌಜನ್ಯಾ ಪರ ಹೋರಾಟಗಾರರು ಹೇಳಿಕೆ ನೀಡಿದ್ದರು. ಅಲ್ಲಿ ಆತ ನೀಡಿದ ಹೇಳಿಕೆಗಳ ಕುರಿತ ವೀಡಿಯೋಗಳು ಬಹಿರಂಗವಾಗಿತ್ತು. ಇದಾದ ಬಳಿಕ ಚಿನ್ನಯ್ಯ ನ್ಯಾಯಾಲಯದಲ್ಲಿ ಹೊಸ ಹೇಳಿಕೆ ನೀಡಿದ್ದ. ಈ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಚಿನ್ನಯ್ಯನ ಪತ್ನಿಯನ್ನು ಹಾಗೂ ಸಹೋದರಿಯನ್ನು ಎಸ್.ಐ.ಟಿ. ಕರೆಸಿದೆ ಎಂದು ತಿಳಿದು ಬಂದಿದೆ.