ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಅರ್.ನಗರ: ಕಳೆದ 30 ತಿಂಗಳಿನಿಂದ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಡಿ.ರವಿಶಂಕರ್ ನೀಡಿರುವ ಕೊಡುಗೆ ಏನು ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪ್ರಶ್ನಿಸಿದರು. ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಜಿಲ್ಲಾ ಯುವ ಜೆಡಿಎಸ್ ಮುಖಂಡ ಹೆಚ್.ಕೆ.ಮಧುಚಂದ್ರ ತಮ್ಮ ವೈಯುಕ್ತಿಕ ವೆಚ್ಚದಲ್ಲಿ ನಿರ್ಮಾಣ ಮಾಡಿಸಿಕೊಟ್ಟಿರುವ ಆಟೋ ನಿಲ್ದಾಣ ಉದ್ಘಾಟಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರಾದ್ಯಂತ ಸರ್ಕಾರಿ ಜಾಗಗಳು ಒತ್ತುವರಿಯಾಗಿದ್ದರೂ ಅದನ್ನು ತೆರವುಗೊಳಿಸಲು ಮುಂದಾಗದ ಶಾಸರು ಹೊಸೂರು ಗ್ರಾಮದಲ್ಲಿ ಆಟೋ ಚಾಲಕರ ಹಿತಕ್ಕಾಗಿ ನಿರ್ಮಿಸಿರುವ ನಿಲ್ದಾಣವನ್ನು ಅಧಿಕಾರಿಗಳ ಮೇಲೆ ಒತ್ತಡ ಹೇರಿ ತೆರವುಗೊಳಿಸಲು ಮುಂದಾಗಿರುವುದು ಹೇಡಿತನದ ರಾಜಕಾರಣ ಎಂದು ಜರಿದರು. ನಿಮ್ಮ ನಡತೆ ಮತ್ತು ವರ್ತನೆಯನ್ನು ಮತದಾರ ಪ್ರಭುಗಳು ಗಮನಿಸುತ್ತಿದ್ದು ಸೂಕ್ತ ಕಾಲದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಅವರಿವರ ಕಾಲು ಹಿಡಿದು ಅನುಕಂಪದಿಂದ ಶಾಸಕರಾಗಿರುವ ನಿಮಗೆ ನನ್ನನ್ನು ಎದುರಿಸಲು ಸಾಧ್ಯವಿಲ್ಲ ಎಂದು ಕುಟುಕಿದ ಸಾ.ರಾ.ಮಹೇಶ್ ನಿಮಗೆ ತಾಕತ್ತಿದ್ದರೆ ಬುಧವಾರ ಹೊಸೂರು ಗ್ರಾಮದಲ್ಲಿ ನಡೆಯಬೇಕಿದ್ದ ಉದ್ಘಾಟನಾ ಸಮಾರಂಭವನ್ನು ತಡೆಯಬೇಕಿತ್ತು ಆಗ ನಾನು ಏನು ಎಂಬುದನ್ನು ತೋರಿಸುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು.
ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಈ ಹಿಂದೆ ಬೆಮಲ್ ನೌಕರರ ಸಂಘದ ಅಧ್ಯಕ್ಷ ರಾಗಿದ್ದಾಗ ನಡೆಸಿದ ಅಕ್ರಮಗಳು ಮತ್ತು ಕರ್ಮಕಾಂಡ ಹಾಗೂ ಹಗರಣಗಳ ಎಲ್ಲಾ ದಾಖಲೆಗಳು ನನ್ನ ಬಳಿ ಇದ್ದು ಸಮಯ ಬಂದಾಗ ಅವುಗಳನ್ನು ಬಹಿರಂಗ ಮಾಡುತ್ತೇನೆ. ನಿಮ್ಮ ಜೀವನದ ಕಥೆ ತಿಳಿದಿದೆ ಎಂದು ಲೇವಡಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಕ್ಷೇತ್ರದಿಂದ ಅತ್ಯಧಿಕ ಮತಗಳಿಂದ ಜಯಗಳಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಚುನಾಯಿತ ಜನಪತ್ರಿನಿಧಿಗಳು ತಮ್ಮ ಸಾಮರ್ಥ್ಯ ವನ್ನು ಅಭಿವೃದ್ಧಿ ಮಾಡುವ ಮೂಲಕ ತೋರಿಸಬೇಕು ಆದರೆ ಜಿಲ್ಲಾ ಜೆಡಿಎಸ್ ಮುಖಂಡ ಹೆಚ್.ಕೆ.ಮಧುಚಂದ್ರ ತಮ್ಮ ಸ್ವಂತ ಹಣದಲ್ಲಿ ಆಟೋ ನಿಲ್ದಾಣ ನಿರ್ಮಿಸಿ ಅದನ್ನು ಲೋಕಾರ್ಪಣೆ ಮಾಡಲು ಕಾರ್ಯಕ್ರಮ ಮಾಡಿದರೆ ರಾಜಕೀಯ ಮಾಡಿ ತಡೆಯಲು ಹೊರಟಿರುವುದು ಲಜ್ಜೆಗೇಡಿನ ರಾಜಕಾರಣ ಎಂದು ಶಾಸಕ ಡಿ.ರವಿಶಂಕರ್ ವಿರುದ್ದ ಹರಿಹಾಯ್ದರು.
ಈ ಸಂದರ್ಭ ಜಿಲ್ಲಾ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎನ್.ರಾಜೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಹೆಚ್.ಆರ್.ಮಹೇಶ್, ಹೆಚ್.ಆರ್.ದಿನೇಶ್, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಸ್.ಜಗದೀಶ್, ಮಾಜಿ ಅಧ್ಯಕ್ಷ ಹೆಚ್.ಆರ್.ಕೃಷ್ಣಮೂರ್ತಿ,ತಾಲೂಕು ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್, ದಮ್ಮನಹಳ್ಳಿ ಧರ್ಮ ನ ನಾಡಪ್ನಳ್ಳಿ ಮಾದೇವ, ವಿನಾಯಕ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಸಂತೋಷ್, ರಾಘು, ರವಿರಂಗ, ಲೋಕೇಶ್, ಪುನೀತ್, ಶ್ರೀನಿವಾಸ್, ದೇವರಾಜು, ರೇವಣ್ಣ, ಮಧು, ಮುಖಂಡರಾದ ಎಲ್ ಐಸಿ ರಮೇಶ್, ಯಶವಂತ್ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸೂಚನೆಯನ್ನು ಧಿಕ್ಕರಿಸಿದ್ದ ಚುಂಚನಕಟ್ಟೆ ಹೋಬಳಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರುಗಳು ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಂದ ಆಟೋ ನಿಲ್ದಾಣ ಉದ್ಘಾಟಿಸಿ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದರು.
ಹೊಸೂರು ಗ್ರಾಮದಲ್ಲಿ ವಿನಾಯಕ ಆಟೋ ನಿಲ್ದಾಣ ನಿರ್ಮಾಣ ಮಾಡಲು ಆಟೋ ಚಾಲಕರು ಅನುಮತಿ ಕೋರಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಆ.11 ರಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಹಿಂಬಹರ ನೀಡಿದ್ದ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ಮಾಣ ಮಾಡಿಕೊಳ್ಳಲು ಅನುಮತಿಸಿದ್ದರು. ಆನಂತರ ಆಟೋ ಚಾಲಕರು ಜಿಲ್ಲಾ ಯುವ ಮುಖಂಡ ಹಳಿಯೂರು ಹೆಚ್.ಕೆ.ಮಧುಚಂದ್ರ ಅವರ ಸಹಕಾರ ಪಡೆದು ನಿಲ್ದಾಣ ನಿರ್ಮಿಸಿ ಅದರ ಉದ್ಘಾಟನಾ ಕಾರ್ಯಕ್ರಮವನ್ನು ಅ.15 ರಂದು ನಿಗದಿ ಪಡಿಸಿದ್ದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರು ಸಾಲಿಗ್ರಾಮ ಪೊಲೀಸ್ ಠಾಣೆಗೆ ಪತ್ರ ಬರೆದು ಚರಂಡಿಯ ಮೇಲೆ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದು ಅವರ ಉದ್ಘಾಟನೆಗೆ ಅನುಮತಿ ಇಲ್ಲದಿರುವುದರಿಂದ ಕಾರ್ಯಕ್ರಮ ಸ್ಥಗಿತಗೊಳಿಸಬೇಕೆಂದು ತಿಳಿಸಿದ್ದರು.

ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರುಗಳು ಹಠಕ್ಕೆ ಬಿದ್ದು ಸಹಾಯಕ ಕಾರ್ಯಪಾಲಕ ಅಭಿಯಂತರರ ವಿರುದ್ದ ರೋಚ್ಚಿಗೆದ್ದು ಬುಧವಾರ ಸಂಜೆ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಂದಲೇ ನಿಲ್ದಾಣ ಉದ್ಘಾಟಿಸಿ ಜಯಘೋಷ ಮೊಳಗಿಸಿ ಸಂಭ್ರಮಾಚರಣೆ ಮಾಡಿದರು.