Monday, December 8, 2025
Google search engine

Homeರಾಜ್ಯಸುದ್ದಿಜಾಲಕೊಡಗು-ಸ್ವಚ್ಛತಾ ಆಂದೋಲನಕ್ಕೆ ಕೊಡಗಿನಾದ್ಯಂತ ಉತ್ತಮ ಸ್ಪಂದನೆ

ಕೊಡಗು-ಸ್ವಚ್ಛತಾ ಆಂದೋಲನಕ್ಕೆ ಕೊಡಗಿನಾದ್ಯಂತ ಉತ್ತಮ ಸ್ಪಂದನೆ

ಮಡಿಕೇರಿ : ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಕೊಡಗು-ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಅತ್ಯುತ್ತಮ ಸ್ಪಂದನೆ ದೊರಕಿದೆ.

ಜಿಲ್ಲೆಯ ಎಲ್ಲೆಲ್ಲೂ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಕೊಡಗಿನ ಸ್ವಚ್ಛತೆ ಸಂಬಂಧಿತ ಕಾಳಜಿ ತೋರಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಕಸ ತೆಗೆಯುವ ಮೂಲಕ ಸ್ವಚ್ಛ ಕೊಡಗು- ಸುಂದರ ಕೊಡಗು ಅಭಿಯಾನಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಚಾಲನೆ ನೀಡಿದರು.

ಸ್ವಚ್ಛ ಮತ್ತು ಸುಂದರ ಕೊಡಗು ನಿರ್ಮಾಣದ ಜವಾಬ್ದಾರಿ ಜಿಲ್ಲೆಯ ಪ್ರತೀಯೊಬ್ಬರ ಮೇಲಿದೆ, ಕೊಡಗನ್ನು ಸ್ವಚ್ಛತೆಯಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಸ್ವಚ್ಛತಾ ಆಂದೋಲನದ ಆಯೋಜನೆ ಶ್ಲಾಘನೀಯ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊಡಗು ಜಿಲ್ಲೆಯ ಸುಂದರ ಪ್ರಕೃತಿ, ಸಂಪನ್ಮೂಲ ಕಾಪಾಡದಿದ್ದರೆ ಭವಿಷ್ಯದಲ್ಲಿ ತೊಡಕು ಉಂಟಾಗುತ್ತದೆ. ಈಗಾಗಲೇ ಏಕಬಳಕೆ ಪ್ಲಾಸ್ಟಿಕ್ ನ್ನು ನಿಷೇಧಿಸಲಾಗಿದೆ. ಮಡಿಕೇರಿಯಲ್ಲಿ 2 ಲೀಟರ್ ಗಿಂತ ಕಡಿಮೆ ಸಂಗ್ರಹ ಸಾಮರ್ಥ್ಯದ ನೀರಿನ ಬಾಟಲ್ಗಳ ಮಾರಾಟ, ಹಾಗೂ ಬಳಕೆಯನ್ನೂ ನಿಷೇಧಿಸಲಾಗಿದೆ. ಇದರಿಂದ ಕಸದ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ ಡಾ.ಮಂತರ್ ಗೌಡ, ಜಿಲ್ಲೆಯ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಒಂದು ದಿನಕ್ಕೆ ಈ ಕಾರ್ಯಕ್ರಮ ಮೀಸಲಾಗದೆ ವರ್ಷವಿಡಿ ಸ್ವಚ್ಛತಾ ಜಾಗೃತಿ ಹೊಂದಿರಬೇಕು. ಹಸಿರು ಸಂರಕ್ಷಣೆಯ ಕ್ರಾಂತಿ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಮನೆಯಿಂದಲೇ ಶೂನ್ಯ ತ್ಯಾಜ್ಯ ಬಗ್ಗೆ ಚಿಂತಿಸಬೇಕು. ಪ್ರವಾಸಿಗರು ಕಸ ಎಸೆದು ಪ್ರಕೃತಿಗೆ ಧಕ್ಕೆ ತರುತ್ತಿರುವ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಿವೆ. ಕೊಡಗಿನ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು ಕಂಡುಬಂದಲ್ಲಿ ಸಂಬಂಧಿಸಿದ ಸ್ಥಳೀಯ ಆಡಳಿತ ಕೂಡಲೇ ಕ್ರಮವಹಿಸಬೇಕು ಎಂದು ತಿಳಿಸಿದರು.

ಸ್ವಚ್ಛ ಕೊಡಗು-ಸುಂದರ ಕೊಡಗು ಸ್ವಚ್ಛತಾ ಅಭಿಯಾನದಲ್ಲಿ ಜಿಲ್ಲೆಯಾದ್ಯಂತ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ಮೈಸೂರಿನ ತ್ಯಾಜ್ಯ ಸಂಗ್ರಹಾಲಯಕ್ಕೆ ಕೊಂಡೊಯ್ದು ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ನೀಡಿದರು.

ಕೊಡಗಿನೆಲ್ಲೆಡೆ ಶುಚಿತ್ವ ಕಾರ್ಯ ಕೈಗೊಳ್ಳಲಾಗಿದೆ. ಸರಕಾರಿ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಿ ಅಭಿಯಾನದಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಅಪಾರ ಸಂಖ್ಯೆಯಲ್ಲಿ ಸಂಘ-ಸಂಸ್ಥೆಗಳು ಈ ಅಭಿಯಾನಕ್ಕೆ ಕೈ ಜೋಡಿಸಿವೆ. ಕೊಡಗಿಗೆ ಅಗತ್ಯವಾಗಿದ್ದ ಅಭಿಯಾನ ಇದಾಗಿದ್ದು, ಅಸಾಧ್ಯ ಯಾವುದು ಇಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಇದು ಕೊಡಗು ಸ್ವಚ್ಛತೆಯ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ವಿವಿಧೆಡೆಗಳ 320 ಕ್ಕೂ ಅಧಿಕ ಸಂಘ ಸಂಸ್ಥೆಗಳು ಪಾಲ್ಗೊಂಡಿವೆ. ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಪ್ರವಾಸೋದ್ಯಮದಿಂದ ಕೊಡಗಿಗೆ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪವಿದೆ. ಈ ಆರೋಪವನ್ನು ದೂರಮಾಡಿ, ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರವಾಸೋದ್ಯಮ ಅವಲಂಬಿತರು ಜವಾಬ್ದಾರಿ ತೆಗೆದುಕೊಂಡು ಈ ಯೋಜನೆ ರೂಪಿಸಲಾಗಿದೆ. ಸುಮಾರು 320 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಈ ಮಹತ್ಕಾರ್ಯಕ್ಕೆ ಕೈ ಜೋಡಿಸುವುದರೊಂದಿಗೆ ಜಿಲ್ಲೆಯಲ್ಲಿ ನವ ಚರಿತ್ರೆ ಬರೆದಿದೆ. ಈ ಸ್ವಚ್ಚತಾ ಆಂದೋಲನದಿಂದಾಗಿ ದೇಶಕ್ಕೇ ಕೊಡಗು ಮಾದರಿಯಾಗಲಿದೆ ಎಂದು ದಿನೇಶ್ ಹೇಳಿದರು.

ಇದು ಒಂದು ದಿನಕ್ಕೆ ಸೀಮಿತವಲ್ಲ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು. ತ್ಯಾಜ್ಯ ಮುಕ್ತ, ಸ್ವಚ್ಛ ಕೊಡಗು ನಿರ್ಮಾಣದ ಸಂಕಲ್ಪದೊದಿಗೆ ವಿವಿಧ ಕಾರ್ಯಯೋಜನೆ ಜಾರಿಗೊಳಿಸಿ ಭವಿಷ್ಯದಲ್ಲಿ ಕೊಡಗನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಸಂಘ ಹೊಂದಿದೆ ಎಂದು ದಿನೇಶ್ ಮಾಹಿತಿ ನೀಡಿದರು. ಕೊಡಗಿನ ಜನತೆಯಲ್ಲಿ ಸ್ವಚ್ಚತೆಯ ಬಗೆಗಿನ ಕಾಳಜಿ ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಸ್ವಚ್ಚತಾ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದರು.

ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ಎಚ್.ಆರ್.ರಮೇಶ್, ಪ್ರಮುಖರಾದ ನಾಪಂಡ ರವಿಕಾಳಪ್ಪ, ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಉಪಾಧ್ಯಕ್ಷ ಜಾಹೀರ್ ಅಹಮ್ಮದ್, ಗೌರವ ಸಲಹೆಗಾರ ಜಿ.ಚಿದ್ವಿಲಾಸ್, ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನದ ಸಾಮಾಜಿಕ ಜಾಲತಾಣ ಪ್ರಚಾರ ಸಮಿತಿ ಸಂಚಾಲಕ ಅನಿಲ್ ಎಚ್.ಟಿ., ಸಂಘದ ನಿರ್ದೇಶಕ ಹರಿಕೃಷ್ಣ, ಮದನ್, ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ ಘಟಕದ ಅಧ್ಯಕ್ಷ ಸಂತೋμï ಅಣ್ಕೇಕರ್, ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಕಾರ್ಯದರ್ಶಿ ನವೀನ್ ಎ.ಕೆ., ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ರೆಡ್ಕ್ರಾಸ್ ಜಿಲ್ಲಾಧ್ಯಕ್ಷ ಬಿ.ಕೆ.ರವೀಂದ್ರ ರೈ, ಔಷಧಿ ವ್ಯಾಪಾರಸ್ಥರ ಸಂಘದ ಜಿಲ್ಲಾ ನಿರ್ದೇಶಕರಾದ ಪ್ರಸಾದ್ ಗೌಡ, ವಸಂತ್ ಕುಮಾರ್, ಅಂಬೆಕಲ್ ವಿನೋದ್ , ಜನರಲ್ ತಿಮ್ಮಯ್ಯ ಶಾಲಾ ಪ್ರಾಂಶುಪಾಲೆ ಬಾಳೆಯಡ ಸವಿತಾ ಪೂವಯ್ಯ, ತಿಮ್ಮಯ್ಯ ಶಾಲಾ ವಿದ್ಯಾರ್ಥಿ, ಶಿಕ್ಷಕಿಯರು, ಇನ್ನರ್ ವೀಲ್ ಕಾರ್ಯದರ್ಶಿ ನಮಿತಾ ರೈ, ಕೊಡಗು ಅಭಿವೃದ್ದಿ ಸಮಿತಿಯ ಸಂಚಾಲಕ ಪ್ರಸನ್ನ ಭಟ್, ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಪ್ರವಾಸೋದ್ಯಮ ಇಲಾಖೆಯ ಪ್ರಬಾರ ಉಪ ನಿರ್ದೇಶಕ ಬಿ.ಬಸಪ್ಪ, ಪ್ರವಾಸೋದ್ಯಮ ಇಲಾಖೆಯ ಸಮಲೋಚಕರಾದ ಜತಿನ್, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡಗು ಟ್ರಾವೆಲ್ಸ್ ಅಸೋಷಿಯೇಷನ್ ಅಧ್ಯಕ್ಷರಾದ ವಸಂತ್, ಮಡಿಕೇರಿ ಲಯನ್ಸ್ ಸಂಸ್ಥೆ ಅಧ್ಯಕ್ಷರಾದ ಮದನ್, ಸೇರಿದಂತೆ ಅನೇಕರು ಹಾಜರಿದ್ದರು.
ಶಾಸಕ ಡಾ.ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಗರದ ಜನರಲ್ ತಿಮ್ಮಯ್ಯ ವೃತ್ತದ ವ್ಯಾಪ್ತಿಯಲ್ಲಿ ತ್ಯಾಜ್ಯ ಹೆಕ್ಕಿದ್ದಲ್ಲದೇ ರಸ್ತೆ ಬದಿಯ ಚರಂಡಿಯೊಳಕ್ಕೂ ಇಳಿದು ಅಲ್ಲಿ ಬಿದ್ದಿದ್ದ ಬಾಟಲಿ, ಕಸ ತ್ಯಾಜ್ಯ ಹೆಕ್ಕಿ ಗಮನ ಸೆಳೆದರು.

ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಜಾರಿಗೊಂಡ ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಕೊಡಗು ಜಿಲ್ಲಾಡಳಿತ, ಜಿ.ಪಂ., ಪ್ರವಾಸೋದ್ಯಮ ಇಲಾಖೆ, ಮಡಿಕೇರಿ ನಗರಸಭೆ, ಸ್ಥಳೀಯ ಸಂಸ್ಥೆಗಳು, ಕೊಡಗು ಚೇಂಬರ್ ಆಫ್ ಕಾಮರ್ಸ್, ಕೊಡಗು ಹೋಂಸ್ಟೇ ಅಸೋಸಿಯೇಷನ್, ರೋಟರಿ, ಲಯನ್ಸ್ ಸಂಸ್ಥೆಗಳು, ಕೊಡಗು ಟ್ರಾವಲ್ ಅಸೋಸಿಯೇಷನ್, ರೆಡ್ಕ್ರಾಸ್, ಖಾಸಗಿ ಶಿಕ್ಷಣ ಸಂಸ್ಥೆ, ವಿವಿಧ ಸಂಘಸಂಸ್ಥೆಗಳು ಬೆಂಬಲ ಸೂಚಿಸಿ ಜಿಲ್ಲಾದ್ಯಂತ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡವು.

RELATED ARTICLES
- Advertisment -
Google search engine

Most Popular