ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಸಕ ಅಶೋಕ ರೈ ನೇತೃತ್ವದಲ್ಲಿ ಕೊಂಬೆಟ್ಟು ಮೈದಾನದಲ್ಲಿ ಹಮ್ಮಿಕೊಂಡ ‘ಅಶೋಕ ಜನಮನ -2025’ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಆಗಮಿಸಿದ್ದರು. ಪರಿಣಾಮ ನೂಕು ನುಗ್ಗಲು ಉಂಟಾಗಿ ಕೆಲವು ಜನರು ಅಸ್ವಸ್ಥರಾದ ಘಟನೆ ನಡೆಯಿತು.
ಅಸ್ವಸ್ಥರಾದವರಿಗೆ ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ರೈ ಎಸ್ಟೇಟ್ ಎಜುಕೇಶನ್ ಮತ್ತು ಚ್ಯಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶಾಸಕ ಅಶೋಕ ರೈ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ದೀಪಾವಳಿ ಪ್ರಯುಕ್ತ 13ನೇ ವರ್ಷದ ವಸ್ತ್ರ ವಿತರಣಾ ಜನಮನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು ವಿಪರ್ಯಾಸವಾಗಿತ್ತು. ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಪೊಲೀಸ್ ಇಲಾಖೆಯು ‘ಆಹಾರ ಮತ್ತು ಗಿಫ್ಟ್ ವಿಳಂಬವಾಗಿ ನೀಡಿದ ಕಾರಣ ಹೈಪೊಗ್ಲೇಸಮೀಯ ಅಥವಾ ಡಿಹೈಡ್ರೇಷನ್ ಉಂಟಾಗಿದೆ. 3 ಮಹಿಳೆಯರಿಗೆ ಐ.ವಿ. ಫ್ಲೂಯಿಡ್ಸ್ ನೀಡಲಾಗಿದ್ದು 7 ಜನ ಮಹಿಳೆಯರು ಈಗಾಗಲೇ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುತ್ತಾರೆ’ ಎಂದು ಪ್ರತಿಕ್ರಿಯೆ ನೀಡಿದೆ.



