ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಲಾಲ್ ಬಾಗ್ ಹ್ಯಾಟ್ ಹಿಲ್ ನ ಅಪಾರ್ಟ್ ಮೆಂಟ್ ನ ಮೂರು ಪ್ಲಾಟ್ ಗಳಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ,ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಅಭಿಜಿತ್ ದಾಸ್ & ದೇಬಾ ದಾಸ್, ಬಂಧಿತರು. ದಿನಾಂಕ 19/20-10-2025 ರಂದು ರಾತ್ರಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮ ಲಾಲ್ ಬಾಗ್ ಹ್ಯಾಟ್ ಹಿಲ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿರುವ 3 ಫ್ಲಾಟ್ ಗಳಿಗೆ ನುಗ್ಗಿದ ಕಳ್ಳರು ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು, 5000 ನಗದು ಹಣ, ದಿಹ್ರಾಮ್ ಹಾಗೂ ಮೊಬೈಲನ್ನು ಕಳ್ಳತನ ಮಾಡಿರುವ ಬಗ್ಗೆ ರಿಯಾಜ್ ರಶೀದ್ ಎಂಬವರು ನೀಡಿದ ದೂರಿನ ಮೇರೆಗೆ ದಿನಾಂಕ 20-10-2025 ರಂದು ಬೆಳಿಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ 104/2025 ಕಲಂ 331(4), 305(ಎ) ಬಿ ಎನ್ ಎಸ್ -2023 ನೇದರಂತೆ ಪ್ರಕರಣ ದಾಖಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಉರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ಶ್ವಾನ ದಳ ಹಾಗೂ ಫಿಂಗರ್ ಪ್ರಿಂಟ್ ತಜ್ಞರ ತಂಡವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆರೋಪಿ ಪತ್ತೆ ಕಾರ್ಯವನ್ನು ನಡೆಸಿತು. ಪ್ರಕರಣ ದಾಖಲಾಗಿ ಸುಮಾರು 20 ಗಂಟೆಗಳ ಒಳಗಾಗಿ ಶೀಘ್ರ ಕಾರ್ಯ ಪ್ರವೃತ್ತರಾಗಿ, ಈ ಮನೆ ಕಳ್ಳತನಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರಾಜ್ಯ ಮನೆ ಕಳ್ಳರನ್ನು ದಿನಾಂಕ 21-10-2025 ರ ಬೆಳಗಿನ ಜಾವ ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿ ಆರೋಪಿತರಿಂದ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಎಲ್ಲಾ ಚಿನ್ನಾಭರಣಗಳನ್ನು, ರೂ 5000/- ನಗದು ಹಣ, ರೂ 70,000/- ಬೆಲೆಯ 3000 Dirham ಹಾಗೂ ಮೊಬೈಲ್ ಫೋನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಅಭಿಜಿತ್ ದಾಸ್ ಎಂಬಾತನ ಮೇಲೆ ಈ ಮೊದಲು ಬೆಂಗಳೂರು ನಗರ ಮತ್ತು ಅಸ್ಸಾಂ ಸೇರಿದಂತೆ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದೆ. ಮೇಲಾಧಿಕಾರಿಗಳ ನಿರ್ದೇಶನದಂತೆ, ಉರ್ವಾ ಪೊಲೀಸರ ತಂಡವು ಬೆಂಗಳೂರಿನಲ್ಲಿ ಸದ್ರಿ ಆರೋಪಿಗಳನ್ನು ದಿನಾಂಕ 21-10-2025 ರಂದು ಬೆಳಗ್ಗಿನ ಜಾವ ಬೆಂಗಳೂರು ನಗರ ಪೊಲೀಸ್ ರವರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಮುಂದಿನ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಮತ್ತು ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು.
ಈ ಕಾರ್ಯಾಚರಣೆಯನ್ನು ಡಿಸಿಪಿ ಕ್ರೈಂ ಇವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಉಪ ವಿಭಾಗದ ಎಸಿಪಿ, ಪಿ.ಐ, ಉರ್ವ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.



