ಹಾಸನ: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆದು 14 ದಿನ ದರ್ಶನ ನೀಡಿದ್ದು, ಇಂದು ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇಗುಲವನ್ನು ಬಂದ್ ಮಾಡಲಾಯಿತು. ಸಾರ್ವಜನಿಕ ದರ್ಶನಕ್ಕೆ ನಿನ್ನೆ ಕಡೆಯ ದಿನವಾಗಿದ್ದರಿಂದ ಮುಂಜಾನೆ ಯಿಂದಲೂ ದೇವಿ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು.
ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತರು ಆಗಮಿಸಿ, ಮಳೆಯ ನಡುವೆಯೂ ತಾಯಿಯನ್ನು ಕಣ್ತುಂಬಿ ಕೊಂಡಿದ್ದಾರೆ. ಇದುವರೆಗೂ 26 ಲಕ್ಷಕ್ಕೂ ಹೆಚ್ಚು ಮಂದಿ ದೇವಿ ದರ್ಶನ ಪಡೆದಿದ್ದಾರೆ.
ಇತಿಹಾಸದಲ್ಲೇ ಮೊದಲು :
ಇತಿಹಾಸದಲ್ಲೇ ಮೊದಲ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ಈ ಮೂಲಕ ಹೊಸ ದಾಖಲೆ ಬರೆದಿ ದ್ದಾರೆ.  ಅ.10ರಿಂದ ಒಟ್ಟು 26ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದು, ಈ ಮೂಲಕ ಹೊಸ ದಾಖಲೆ ಬರೆದಿದೆ.
ಹಾಸನಾಂಬೆ ದೇವಸ್ಥಾನಕ್ಕೆ 1,000, 300ರೂ. ಟಿಕೆಟ್ ಹಾಗೂ ಲಾಡು ಪ್ರಸಾದದಿಂದ ದೇಗುಲಕ್ಕೆ ಒಟ್ಟು 26 ಕೋಟಿ ರೂ. ಆದಾಯ ಬಂದಿದ್ದು, ನಿನ್ನೆ ಸಂಜೆ 7 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಅದ್ಧೂರಿ ತೆರೆ ಬಿದ್ದಿದೆ.



                                    